ಕರ್ನಾಟಕ ಹೈಕೋರ್ಟ್
ಬೆಂಗಳೂರು: ಮದುವೆಯಾಗುವ ಭರವಸೆ ನೀಡಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
‘ನನ್ನ ವಿರುದ್ಧದ ಎಫ್‌ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿ ಈ ಕುರಿತಂತೆ ಆದೇಶಿಸಿದೆ.
‘ಈ ಪ್ರಕರಣದಲ್ಲಿ ದೂರುದಾರ ಮಹಿಳೆ ಕಾನೂನು ನೆರವು ಕೋರಿ ಅರ್ಜಿದಾರ ವಕೀಲರನ್ನು ಸಂಪರ್ಕಿಸಿದ್ದಾರೆ. ಅಂತೆಯೇ, ಮುಂದುವರಿದು ಪರಸ್ಪರ ಸ್ನೇಹ ಸಂಪಾದಿಸಿ ಕೊಂಡಿದ್ದಾರೆ. ತದನಂತರ ಎರಡು ವರ್ಷಗಳ ಅವಧಿಯಲ್ಲಿ ಒಪ್ಪಿಗೆಯ ಸಂಭೋಗ ನಡೆಸಿರುವುದನ್ನು ದೂರಿನ ಅಂಶಗಳು ಮೇಲ್ನೋಟಕ್ಕೆ ವಿಶದಪಡಿಸುತ್ತವೆ. ಹಾಗಾಗಿ, ಈ ಪ್ರಕರಣ ಅತ್ಯಾಚಾರ ಮತ್ತು ಒಪ್ಪಿತ ಲೈಂಗಿಕ ಚಟುವಟಿಕೆಗಳ ಬಲೆಯಲ್ಲಿ ನೇಯ್ದುಕೊಂಡಿದೆ’ ಎಂಬ ಅಭಿಪ್ರಾಯದೊಂದಿಗೆ ಎಫ್‌ಐಆರ್ ರದ್ದುಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.