ADVERTISEMENT

ರಾಷ್ಟ್ರೀಯ ಲೋಕ ಅದಾಲತ್‌: 25 ಲಕ್ಷಕ್ಕೂ ಹೆಚ್ಚು ಪ್ರಕರಣ ಇತ್ಯರ್ಥ

ಕಕ್ಷಿದಾರರಿಗೆ ಒಟ್ಟು ₹ 1,569 ಕೋಟಿ ಮೊತ್ತದ ಪರಿಹಾರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 20:08 IST
Last Updated 12 ಡಿಸೆಂಬರ್ 2023, 20:08 IST
<div class="paragraphs"><p>ಲೋಕ ಅದಾಲತ್‌</p></div>

ಲೋಕ ಅದಾಲತ್‌

   

ಬೆಂಗಳೂರು: ‘ರಾಜ್ಯದಾದ್ಯಂತ ಇದೇ 9ರಂದು ನಡೆಸಲಾದ ರಾಷ್ಟ್ರೀಯ ಲೋಕ್‌ ಅದಾಲತ್​ನಲ್ಲಿ 25 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು ₹ 1,569 ಕೋಟಿ ಮೊತ್ತವನ್ನು ಪರಿಹಾರ ರೂಪದಲ್ಲಿ ಕಕ್ಷಿದಾರರಿಗೆ ನೀಡಲಾಗಿದೆ‘ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ತಿಳಿಸಿದರು.

ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ಹೈಕೋರ್ಟ್‌ನ ಮೂರೂ ಪೀಠಗಳು ಸೇರಿದಂತೆ ರಾಜ್ಯದಾದ್ಯಂತ ಒಟ್ಟು 1,022 ಪೀಠಗಳು ಅದಾಲತ್​ ನಡೆಸಿವೆ. ಬಾಕಿ ಇದ್ದ 2,24,080 ಪ್ರಕರಣಗಳು ಹಾಗೂ 22,90,263 ವ್ಯಾಜ್ಯಪೂರ್ವ ಪ್ರಕರಣಗಳೂ ಸೇರಿದಂತೆ ಒಟ್ಟು 25,14,343 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ‘ ಎಂದರು.

ADVERTISEMENT

‘ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಎಚ್‌.ಬಿ.ಪ್ರಭಾಕರ ಶಾಸ್ತ್ರಿ ಅವರು ಬೆಂಗಳೂರು ಪೀಠದಲ್ಲಿ ಲೋಕ್‌ ಅದಾಲತ್‌ನ ನೇತೃತ್ವ ವಹಿಸಿ 1,087 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ. ನ್ಯಾಯಮೂರ್ತಿ ಎಸ್‌.ಸುನೀಲ್‌ ದತ್‌ ಯಾದವ್‌ ಮತ್ತು ನ್ಯಾಯಾಂಗೇತರ ಸಂಧಾನಕಾರ ಶ್ರೀವತ್ಸ ಹೆಗ್ಡೆ ಅವರನ್ನು ಒಳಗೊಂಡ ಪೀಠವು, 22 ತಕರಾರು ಅರ್ಜಿಗಳನ್ನು ವಿಲೇವಾರಿ ಮಾಡಿದೆ‘ ಎಂದು ವಿವರಿಸಿದರು.

10 ಸಾವಿರ ಚೆಕ್‌ ಬೌನ್ಸ್‌ ಕೇಸ್‌ ವಿಲೇವಾರಿ: ’ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳಲ್ಲಿ 4,031 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಒಟ್ಟು ₹ 209 ಕೋಟಿ ಮೊತ್ತವನ್ನು ಸಂತ್ರಸ್ತರಿಗೆ ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ. 10,513 ಚೆಕ್​ ಬೌನ್ಸ್, 3,125 ವಿಭಾಗ ದಾವೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 522 ಭೂ ಸ್ವಾಧೀನ ಅಮಲ್ಜಾರಿ (ಎಲ್‌ಎಸಿ ಎಕ್ಸಿಕ್ಯೂಷನ್‌) ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ₹ 120 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ‘ ಎಂದು ನ್ಯಾಯಮೂರ್ತಿ ದಿನೇಶ್‌ ಕುಮಾರ್ ತಿಳಿಸಿದರು.

‘839 ಮೋಟಾರು ವಾಹನ ಅಮಲ್ಜಾರಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ₹ 51 ಕೋಟಿ ಪರಿಹಾರ ವಿತರಿಸಲಾಗಿದೆ. ಇತರೆ 3,290 ಅಮಲ್ಜಾರಿ ಪ್ರಕರಣಗಳು ಇತ್ಯರ್ಥವಾಗಿದ್ದು, ₹ 124 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. 28 ರೇರಾ ಪ್ರಕರಣಗಳಲ್ಲಿ ₹ 32 ಲಕ್ಷ ಪರಿಹಾರ, 88 ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳಲ್ಲಿ ₹ 2.47 ಕೋಟಿ ಪರಿಹಾರ ನೀಡಲಾಗಿದೆ‘ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.