ADVERTISEMENT

ರಾಯಣ್ಣನ ‘ಶೌರ್ಯವನ’ ಸಿದ್ಧ: ಕಿತ್ತೂರು ಕಾಲದ ಸನ್ನಿವೇಶಗಳ ಮರುಸೃಷ್ಟಿ

ಕಿತ್ತೂರು ಸಂಸ್ಥಾನ ಕಾಲದ ಸನ್ನಿವೇಶಗಳ ಮರುಸೃಷ್ಟಿ, ನೈಜತೆಯೇ ಮೈದಳೆದ ನೋಟ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 19:28 IST
Last Updated 25 ಜನವರಿ 2023, 19:28 IST
ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ನಿರ್ಮಿಸಿದ ಶೌರ್ಯವನದಲ್ಲಿ ಕಿತ್ತೂರು ಸಂಸ್ಥಾನ ಹಾಗೂ ಬ್ರಿಟಿಷರ ಮಧ್ಯದ ಯುದ್ಧದ ಸನ್ನಿವೇಶ
ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ನಿರ್ಮಿಸಿದ ಶೌರ್ಯವನದಲ್ಲಿ ಕಿತ್ತೂರು ಸಂಸ್ಥಾನ ಹಾಗೂ ಬ್ರಿಟಿಷರ ಮಧ್ಯದ ಯುದ್ಧದ ಸನ್ನಿವೇಶ   

ಸಂಗೊಳ್ಳಿ (ಬೆಳಗಾವಿ ಜಿಲ್ಲೆ): ಖಡ್ಗ ಹಿಡಿದು ‍ಪರಾಕ್ರಮ ತೋರುವ ಸಂಗೊಳ್ಳಿ ರಾಯಣ್ಣ, ಸಿಂಹಾಸನದ ಮೇಲೆ ಕುಳಿತು ನಾಡಮಕ್ಕಳಿಗೆ ಧೈರ್ಯ ಹೇಳುವ ರಾಣಿ ಚನ್ನಮ್ಮ, ಬ್ರಿಟಿಷ್‌ ಸೈನ್ಯದೊಂದಿಗೆ ರಣಾಂಗಣದಲ್ಲಿ ರಕ್ತ ಹರಿಸಿದ ಕಿತ್ತೂರು ಕಲಿಗಳು, ಕ್ರಾಂತಿವೀರನನ್ನು ಗಲ್ಲಿಗೇರಿಸಿದ ಗಾಂಭೀರ್ಯದ ನೋಟ...

ಒಂದೇ, ಎರಡೇ! ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ ಬಿಂಬಿಸುವ 1,800ಕ್ಕೂ ಅಧಿಕ ಕಲಾಕೃತಿಗಳು ಇಲ್ಲಿವೆ.

ಇದರ ಹೆಸರು ಶೌರ್ಯವನ. ರಾಯಣ್ಣನ ಜನ್ಮಸ್ಥಳ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ಇದನ್ನು ನಿರ್ಮಿಸಲಾಗಿದೆ. 10 ಎಕರೆ ವಿಸ್ತಾರದಲ್ಲಿ ಕಿತ್ತೂರು ಸಂಸ್ಥಾನದ 64 ವಿವಿಧ ಸನ್ನಿವೇಶಗಳನ್ನು ಇಲ್ಲಿ ಸಿದ್ಧಪಡಿಸಲಾಗಿದೆ. ಸಿಮೆಂಟ್‌, ಕಬ್ಬಿಣ ಹಾಗೂ ಕೆಂಪು ಇಟ್ಟಿಗೆಯಿಂದ ಸಿದ್ಧಪಡಿಸಿದ ಇಲ್ಲಿನ ಪ್ರತಿಯೊಂದು ಕಲಾಕೃತಿ ನೈಜತೆಯಿಂದ ಕೂಡಿವೆ.

ADVERTISEMENT

ಹಾವೇರಿ ಜಿಲ್ಲೆಯ ಗೋಟಗೋಡಿಯ ಶಿಲ್ಪಕಲಾ ಕುಟೀರದ 150 ಕಲಾವಿದರು ಎರಡು ವರ್ಷಗಳಿಂದ ಶೌರ್ಯವನ ನಿರ್ಮಿಸುತ್ತಿದ್ದಾರೆ. ಕೋಟೆ, ಅರಮನೆ, ರಣರಂಗ, ಕುಸ್ತಿ ಅಖಾಡ, ಗರಡಿಮನೆ, ರಾಯಣ್ಣನ ಮನೆ, ಅವನ ತಾಯಿ–ತಂಗಿಯ ಬದುಕು, ರಾಜಾ ಮಲ್ಲಸರ್ಜ, ರಾಣಿ ಚನ್ನಮ್ಮನ ರಾಜವೈಭೋಗ, 192 ವರ್ಷಗಳ ಹಿಂದೆ ಸಂಗೊಳ್ಳಿ ಗ್ರಾಮ ಹಾಗೂ ಕಿತ್ತೂರು ಸಂಸ್ಥಾನ ಹೇಗಿತ್ತು ಎಂಬುದನ್ನು ಮನೋಜ್ಞವಾಗಿ ಸಿದ್ಧಪಡಿಸಲಾಗಿದೆ.

ಏನೇನಿದೆ ಇಲ್ಲಿ: ರಾಯಣ್ಣನ ಅಜ್ಜ ರೋಗಪ್ಪ ಅವರ ಕಾಲದಿಂದ ಅರಂಭವಾಗಿ ರಾಯಣ್ಣ ಹುಟ್ಟು, ಬಾಲ್ಯ, ತಾರುಣ್ಯ, ಹೋರಾಟ, ಗೆರಿಲ್ಲಾ ಕೌಶಲ, ಯುದ್ಧ ತಂತ್ರಗಳು, ಸುರಪುರ ಅರಸರ ಭೇಟಿ, ರಾಯಣ್ಣನ ತಂಗಿ ಮಲ್ಲವ್ವಳ ಬಲಿದಾನ, ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ
ರಾಯಣ್ಣನ ಗಲ್ಲಿಗೇರಿಸಿದ ಸಂದರ್ಭ ಮತ್ತಿತರ ಮಾಹಿತಿ ಸಾರುವ ಸನ್ನಿವೇಶಗಳು ರೋಮಾಂಚಕವಾಗಿವೆ.

ಧಾರವಾಡ ವಿಶೇಷ ನ್ಯಾಯಾಲಯದಲ್ಲಿ ರಾಯಣ್ಣನ ವಿಚಾರಣೆ ನಡೆಸಿದ ಜೈಲು ನಿರ್ಮಾಣ ಮಾಡಲಾಗುತ್ತಿದೆ. ಇವೆಲ್ಲ ಸನ್ನಿವೇಶಗಳಿಗೆ ಕಾರ್ಮಿಕರು ಅಂತಿಮ ಸ್ಪರ್ಶ ಕೊಡುತ್ತಿದ್ದಾರೆ.

ಆಕರ್ಷಕ ಪ್ರವಾಸಿ ತಾಣ

ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷ್‌ ಸರ್ಕಾರ 1831ರ ಜನವರಿ 26ರಂದು ಗಲ್ಲಿಗೇರಿಸಿತು. ಈ ಘಟನೆಗೆ ಇದೇ ಜನವರಿ 26ಕ್ಕೆ 192 ವರ್ಷ ತುಂಬುತ್ತದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಯಣ್ಣನ ಜತೆಗೆ ಅವನ ಜನ್ಮಸ್ಥಳಕ್ಕೂ ಇತಿಹಾಸದಲ್ಲಿ ಪ್ರಾಮುಖ್ಯ ನೀಡುವ ಉದ್ದೇಶದಿಂದ ಈ ಶೌರ್ಯವನ ನಿರ್ಮಿಸಲಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಇದು ಹೆಚ್ಚು ಆಕರ್ಷಣೀಯ ಆಗಲಿದೆ.

ಈ ಹಿಂದೆ ನೀಡಿದ್ದ ₹12 ಕೋಟಿ ವೆಚ್ಚದಲ್ಲಿ ಅತ್ಯಂತ ಸುಂದರವಾಗಿ ಶೌರ್ಯವನ ನಿರ್ಮಿಸಿದ್ದೇವೆ. ಶೇ 90 ಕಾಮಗಾರಿ ಮುಗಿದಿದೆ. ಈಗ ಹೆಚ್ಚುವರಿಯಾಗಿ ₹5 ಕೋಟಿ ಅನುದಾನ ಕೇಳಿದ್ದೇವೆ. ಅದು ಬಿಡುಗಡೆ ಹಂತದಲ್ಲಿದೆ. ಸಂಪರ್ಕ ರಸ್ತೆ, ಹೋಟೆಲ್, ಟಿಕೆಟ್ ಕೌಂಟರ್, ಬ್ಯಾರಿಕೇಡ್, ಪ್ರಾಕೃತಿಕ ಸೌಂದರ್ಯ, ಪ್ರಯಾಣಿಕರ ತಂಗುದಾಣ ಮತ್ತಿತರ ಕಾಮಗಾರಿ ಕೈಗೊಳ್ಳಲಾಗುವುದು. ಇನ್ನೆರಡು ತಿಂಗಳಲ್ಲಿ ಲೋಕಾರ್ಪಣೆಗೆ ಸಿದ್ಧವಾಗಲಿದೆ’ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.