ಬೆಂಗಳೂರು: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ನಾವು ನ್ಯಾಯಾಲಯದ ಮೆಟ್ಟಿಲು ಹತ್ತಿದೆವು. ಅಂತಿಮವಾಗಿ ನಮ್ಮ ಹೋರಾಟಕ್ಕೆ ಗೆಲುವು ಸಿಕ್ಕಿದೆ’ ಎಂದು ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬಿಜೆಪಿ ಪರವಾಗಿ ಅರವಿಂದ ಲಿಂಬಾವಳಿ, ರಮೇಶ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ ಮತ್ತು ನಾನು ಸಹಿ ಮಾಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆವು. ನಮ್ಮ ಹೋರಾಟಕ್ಕೆ ನ್ಯಾಯಾಲಯದ ಮನ್ನಣೆ ಸಿಕ್ಕಿದೆ’ ಎಂದು ಅವರು ತಿಳಿಸಿದರು.
‘ಪ್ರಕರಣವನ್ನು ಸಿಬಿಐಗೆ ಕೊಟ್ಟ ತಕ್ಷಣ ಎಲ್ಲವೂ ಮುಗಿದಿಲ್ಲ. ಈಗ ಆರಂಭ ಅಷ್ಟೇ, ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಾದ ಜನರ ತೆರಿಗೆ ಹಣ ಮತ್ತು ದುಡಿಮೆಯ ಹಣ ದುರುಪಯೋಗ ಆಗಿದೆ. ನಿಗಮದ ಹಣ ಚುನಾವಣೆಗೆ ಬಳಕೆಯಾಗಿದೆ. ದುರುಪಯೋಗ ಮಾಡಿರುವ ಎಲ್ಲರಿಗೂ ತಕ್ಕ ಶಾಸ್ತಿ ಆಗಬೇಕು’ ಎಂದು ಅವರು ತಿಳಿಸಿದರು.
‘ಈ ಹಗರಣದಲ್ಲಿ ವಾಲ್ಮೀಕಿ ಸಮಾಜದ ಜನರಿಗೆ ನ್ಯಾಯ ಸಿಗಬೇಕಾಗಿದೆ. ಪಕ್ಷದಿಂದ ಇನ್ನಷ್ಟು ಸಹಕಾರ ಸಿಕ್ಕಿದ್ದರೆ, ಈ ಪ್ರಕರಣವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಒಯ್ಯಲು ಸಾಧ್ಯವಿತ್ತು. ಪಕ್ಷದೊಳಗಿನ ಗೊಂದಲದಿಂದ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯವಾಗಲಿಲ್ಲ’ ಎಂದು ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.