ADVERTISEMENT

ಅಂಬಿಯಣ್ಣನಿಗೆ ಕಂಬನಿ ಧಾರೆ

ಕಂಠೀರವ ಸ್ಟುಡಿಯೊದಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2018, 1:45 IST
Last Updated 26 ನವೆಂಬರ್ 2018, 1:45 IST
ಅಂಬರೀಷ್ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿರುವ ಮಗ ಅಭಿಷೇಕ್. ಅಂಬರೀಷ್ ಅವರ ಹೆಂಡತಿ ಸುಮಲತಾ ಇದ್ದಾರೆ -–ಪ್ರಜಾವಾಣಿ ಚಿತ್ರ/ರಂಜು ಪಿ.
ಅಂಬರೀಷ್ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿರುವ ಮಗ ಅಭಿಷೇಕ್. ಅಂಬರೀಷ್ ಅವರ ಹೆಂಡತಿ ಸುಮಲತಾ ಇದ್ದಾರೆ -–ಪ್ರಜಾವಾಣಿ ಚಿತ್ರ/ರಂಜು ಪಿ.   

ಬೆಂಗಳೂರು/ಮಂಡ್ಯ: ಚಿರನಿದ್ರೆಗೆ ಜಾರಿದ ಸ್ಯಾಂಡಲ್‌ವುಡ್‌ ‘ರೆಬೆಲ್‌ ಸ್ಟಾರ್‌’, ಮಾಜಿ ಸಚಿವ ಎಂ.ಎಚ್‌. ಅಂಬರೀಷ್ ಅವರನ್ನು ನೆನೆದು ರಾಜಕೀಯ– ಚಿತ್ರರಂಗದ ನೂರಾರು ಗಣ್ಯರು, ಸಾವಿರಾರು ಅಭಿಮಾನಿಗಳು ಕಂಬನಿ ಮಿಡಿದರು.

ಬೆಂಗಳೂರಿನ ವಿಕ್ರಮ್‌ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾದ ಅಂಬರೀಷ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಭಾನುವಾರ ಬೆಳಗ್ಗಿನಿಂದ ಸಂಜೆ 3.30ರವರೆಗೆ ಕಂಠೀರವ ಕ್ರೀಡಾಂಗಣದಲ್ಲಿ ಮತ್ತು ಬಳಿಕ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಈ ಕ್ರೀಡಾಂಗಣಗಳಿಗೆ ಹರಿದುಬಂದ ಜನಸಾಗರ, ತಮ್ಮ ಪ್ರೀತಿಯ ‘ಅಂಬಿ’ಯಣ್ಣನಿಗೆ ಅಶ್ರುತರ್ಪಣ ಸಲ್ಲಿಸಿದರು. ದಕ್ಷಿಣ ಭಾರತದ ಖ್ಯಾತ ನಟ-ನಟಿಯರು ಅಂಬಿ ಜೊತೆಗಿನ ಒಡನಾಟ ನೆನೆದು ಕಣ್ಣೀರಿಟ್ಟರು.

ADVERTISEMENT

ಏರ್‌ಲಿಫ್ಟ್‌: ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂಬ ಮಂಡ್ಯದ ಜನರ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸೇನಾ ಹೆಲಿಕಾಪ್ಟರ್‌ ಮೂಲಕ ಪಾರ್ಥಿವ ಶರೀರ ಕೊಂಡೊಯ್ಯಲು ಅವಕಾಶ ನೀಡುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು. ಅದಕ್ಕೆ ಸಚಿವೆ ತಕ್ಷಣವೇ ಸ್ಪಂದಿಸಿದ್ದರು.

‌‘ಮಂಡ್ಯದ ಗಂಡು’ ಅಂಬರೀಷ್‌ ಸಾವಿನಿಂದ ಇಡೀ ಜಿಲ್ಲೆ ಶೋಕದಲ್ಲಿ ಮುಳುಗಿತ್ತು. ವ್ಯಾಪಾರ–ವಹಿವಾಟು, ಚಿತ್ರಮಂದಿರಗಳು ಬಂದ್‌ ಆಗಿದ್ದವು. ಅಗಲಿದ ನಾಯಕನ ಆತ್ಮಕ್ಕೆ ಶಾಂತಿ ಕೋರುವ ಕಟೌಟ್‌ಗಳನ್ನು ಅಲ್ಲಲ್ಲಿ ಹಾಕಲಾಗಿತ್ತು. ಅಂತಿಮ ದರ್ಶನ ಪಡೆಯುವಾಗ ಕೆಲವು ಅಭಿಮಾನಿಗಳು ಎದೆ, ಬಾಯಿ ಬಡಿದುಕೊಂಡರು.

ಪಾರ್ಥಿವ ಶರೀರದ ಎದುರು ಜನಪದ ಗಾಯಕರು ಸ್ಥಳದಲ್ಲೇ ಹಾಡು ಕಟ್ಟಿದಾಗ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ನೋವು ತುಂಬಿದ ಆಲಾಪಗಳಲ್ಲಿ ಅಭಿಮಾನಿಗಳು ಗೊಳೋ ಎಂದರು. ಭಜನೆ, ತತ್ವಪದ, ವಚನಗಳು ನೆರೆದವರ ಕಣ್ಣಾಲಿಗಳನ್ನು ಆರ್ದ್ರಗೊಳಿಸಿದವು.

ಆಸ್ಪತ್ರೆಯಿಂದ ಮನೆಗೆ: ಅಂಬರೀಷ್‌ ಪಾರ್ಥಿವ ಶರೀರವನ್ನು ವಿಕ್ರಮ್ ಆಸ್ಪತ್ರೆಯಿಂದ ಭಾನುವಾರ ನಸುಕಿನಲ್ಲಿ ಜೆ.ಪಿ. ನಗರದಲ್ಲಿರುವ ಮನೆಗೆ ಕೊಂಡೊಯ್ಯಲಾಯಿತು. ನಂತರ, ಚಾಮರಾಜಪೇಟೆಯಲ್ಲಿರುವ ಚಲನಚಿತ್ರ ಕಲಾವಿದರ ಸಂಘದ ಕಚೇರಿಗೆ ಕೊಂಡೊಯ್ದು, ಅಂತಿಮ ನಮನ ಸಲ್ಲಿಸಲಾಯಿತು. ಬೆಳಿಗ್ಗೆ 8 ಗಂಟೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಂಜೆ 3.30ಕ್ಕೆ ಅಂಬ್ಯುಲೆನ್ಸ್‌ನಲ್ಲಿ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಸಾಗಿಸಿ, ಸೇನಾ ಹೆಲಿಕಾಪ್ಟರ್‌ ಮೂಲಕ ಮಂಡ್ಯಕ್ಕೆ ಕೊಂಡೊಯ್ಯಲಾಯಿತು. ಅದೇ ಹೆಲಿಕಾಪ್ಟರ್‌ನಲ್ಲಿ ಮುಖ್ಯಮಂತ್ರಿ ಕೂಡಾ ತೆರಳಿದರು. ಎರಡು ಖಾಸಗಿ ಹೆಲಿಕಾಪ್ಟರ್‌ಗಳಲ್ಲಿ ಅಂಬರೀಷ್‌ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌ ಗೌಡ ಮತ್ತು ಸಂಬಂಧಿಕರು ಪ್ರಯಾಣಿಸಿದರು.

ಅಂತಿಮ ದರ್ಶನಕ್ಕೆ ಇಡಲಾಗಿದ್ದ ಪ್ರದೇಶದ ಸುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

‘ಚಿತ್ರರಂಗ –ರಾಜಕಾರಣ ಎರಡೂ ಕ್ಷೇತ್ರಗಳಲ್ಲಿ ಮಿಂಚಿದ ಮಹಾನ್ ನಾಯಕ. ಸಾವಿರ ಕೋಟಿಗೆ ಒಬ್ಬರು. ಒಮ್ಮೊಮ್ಮೆ ಸಾವಿನ ವಿಚಾರದಲ್ಲೂ ‘ರೆಬೆಲ್’ ಆಗಿದ್ದವರು. ಕಾವೇರಿ ವಿಚಾರದಲ್ಲಿ ರಾಜೀನಾಮೆ ಕೊಟ್ಟ ಅಪ್ಪಟ ಸ್ವಾಭಿಮಾನಿ. ಚಿತ್ರರಂಗದ ಯಾವುದೇ ಸಮಸ್ಯೆಗಳು ಎದುರಾದಾಗ ಎಲ್ಲರಿಗೂ ಅಂಬರೀಷ್‌ ಅಣ್ಣನೇ ಬೇಕಾಗಿತ್ತು’ ಎಂದು ಚಿತ್ರರಂಗದ ಹಲವರು ಶೋಕ ವ್ಯಕ್ತಪಡಿಸಿದರು.

**

ವಾಹನಗಳ ಮಾರ್ಗ ಬದಲಾವಣೆ

* ಅಂತಿಮ ಯಾತ್ರೆ ಸಾಗುವ ಹಾಗೂ ಅಂತ್ಯ ಸಂಸ್ಕಾರ ನಡೆಯುವ ವೇಳೆಯಲ್ಲಿ ಸುಮನಹಳ್ಳಿ ಜಂಕ್ಷನ್‌ನಿಂದ ಗೊರಗುಂಟೆಪಾಳ್ಯ ಕಡೆಗೆ ಹಾದು ಹೋಗುವ ಹೊರವರ್ತುಲ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

* ಆ ರಸ್ತೆಯ ಬದಲು ಮಾಗಡಿ ರಸ್ತೆ, ಕಾಮಾಕ್ಷಿಪಾಳ್ಯ, ಹೌಸಿಂಗ್ ಬೋರ್ಡ್, ಮಾಗಡಿ ರಸ್ತೆ ಟೋಲ್ ಗೇಟ್ ಹಾಗೂ ವೆಸ್ಟ್ ಆಫ್ ಕಾರ್ಡ್ ರಸ್ತೆ ಮೂಲಕ ವಾಹನಗಳು ಸಂಚರಿಸಬಹುದು.

* ಗೊರಗುಂಟೆಪಾಳ್ಯ ಜಂಕ್ಷನ್‌ನಿಂದ ಸುಮನಹಳ್ಳಿ ಜಂಕ್ಷನ್‌ ಕಡೆಗೆ ಹೋಗುವ ತುಮಕೂರು ರಸ್ತೆಯಲ್ಲಿ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ. ಆ ರಸ್ತೆಯ ಬದಲು ಗೊರಗುಂಟೆಪಾಳ್ಯ, ಎಂ.ಎ.ಐ ಜಂಕ್ಷನ್, ಆರ್‌.ಎಂ.ಸಿ ಯಾರ್ಡ್, ಮಾರಪ್ಪನ ಪಾಳ್ಯ, ಸ್ಯಾಂಡಲ್ ಸೋಫ್ ಫ್ಯಾಕ್ಟರಿ ಹಾಗೂ ವೆಸ್ಟ್ ಆಫ್‌ ಕಾರ್ಡ್‌ ರಸ್ತೆ ಮೂಲಕ ಸಂಚರಿಸಬಹುದು.

* ಸ್ಯಾಂಕಿ ರಸ್ತೆ– ಮಾರಮ್ಮ ವೃತ್ತ– ಯಶವಂತಪುರದಿಂದ ಹೋಗುವ ತುಮಕೂರು ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಅದರ ಬದಲಿಗೆ, ಮೇಖ್ರಿ ವೃತ್ತ, ಸಿ.ವಿ.ರಾಮನ್ ರಸ್ತೆ, ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್, ಬಿಇಎಲ್ ರಸ್ತೆ, ಕುವೆಂಪು ವೃತ್ತ, ಬಿಇಎಲ್ ವೃತ್ತ, ಗಂಗಮ್ಮಗುಡಿ ವೃತ್ತದ ಮೂಲಕ ತುಮಕೂರು ರಸ್ತೆಗೆ ಸಂಚರಿಸಬಹುದು.

**

ರಾಹುಕಾಲ: ಬೆ.9 ಗಂಟೆಗೆ ಬೆಂಗಳೂರಿಗೆ

ಸೋಮವಾರ ಬೆಳಿಗ್ಗೆ 7.30ರಿಂದ 9 ಗಂಟೆಯವರೆಗೆ ರಾಹುಕಾಲ ಇರುವ ಕಾರಣ ಮೃತದೇಹವನ್ನು 9 ಗಂಟೆ ನಂತರ ಮಂಡ್ಯದಿಂದ ಬೆಂಗಳೂರಿಗೆ ತರಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬಳಿಕ, ಮತ್ತೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಮತ್ತೆ ತಂದು, ಅಲ್ಲಿಂದ ಕಂಠೀರವ ಸ್ಟುಡಿಯೋಕ್ಕೆ ಅಂತಿಮ ಯಾತ್ರೆ ಹೊರಡಲಿದೆ.

**

ಭದ್ರತೆಗೆ ಪೊಲೀಸ್ ಬಲ

30 ಕೆಎಸ್ಆರ್‌ಪಿ ತುಕಡಿ

34 ನಗರ ಸಶಸ್ತ್ರ ಮೀಸಲು ಪಡೆ ತುಕಡಿ

3 ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್‌) ಕಂಪನಿ

5 ಕ್ಷಿಪ್ರ ಕಾರ್ಯಪಡೆ ಗಸ್ತು ವಾಹನಗಳು

**

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.