ADVERTISEMENT

ಸಂದರ್ಶನದಲ್ಲಿ ಶೇ 40ಕ್ಕಿಂತ ಕಡಿಮೆ ಅಂಕಕ್ಕೆ ಕಾರಣ ದಾಖಲಿಸಿ: ರಾಜ್ಯ ಸರ್ಕಾರ

ಪಿಡಬ್ಯುಡಿ 660 ಹುದ್ದೆಗೆ ಸಂದರ್ಶನ: ಸಂದರ್ಶಕ ಮಂಡಳಿ ರಚನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 19:46 IST
Last Updated 5 ನವೆಂಬರ್ 2022, 19:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಯುಡಿ) ಸಹಾಯಕ ಎಂಜಿನಿಯರ್‌ (ಗ್ರೇಡ್‌ -1) 660 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ನಡೆಸಲಿರುವ ಸಂದರ್ಶನದಲ್ಲಿ (ವ್ಯಕ್ತಿತ್ವ ಪರೀಕ್ಷೆ) ಭಾರಿ ಅಕ್ರಮ ನಡೆಯುವ ಸಾಧ್ಯತೆ ಇದೆ ಎಂದು ಅಭ್ಯರ್ಥಿಗಳು ಆರೋಪಿಸಿದ ಬೆನ್ನಲ್ಲೆ, 50 ಅಂಕಗಳಿಗೆ ನಡೆಯಲಿರುವ ಸಂದರ್ಶನದಲ್ಲಿ ಶೇ 80ಕ್ಕಿಂತ ಹೆಚ್ಚು (40 ಅಂಕ) ಅಥವಾ ಶೇ 40ಕ್ಕಿಂತ ಕಡಿಮೆ (20 ಅಂಕ) ಅಂಕ ನೀಡಿದರೆ, ಅದಕ್ಕೆ ಸಂದರ್ಶಕ ಮಂಡಳಿ ಕಾರಣ ದಾಖಲಿಸಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ.

ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 1:3 ಅನುಪಾತದಲ್ಲಿ ಸಂದರ್ಶನಕ್ಕೆ ಒಟ್ಟು 1972 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇದೇ 7ರಿಂದ ಸಂದರ್ಶನ ನಡೆಯಲಿದೆ. ‘ಸಂದರ್ಶನದಲ್ಲಿ ಅಂಕಗಳನ್ನು ನೀಡುವ ವೇಳೆ ಅಕ್ರಮ ನಡೆಯುವ ಸಾಧ್ಯತೆ ಇದೆ. ಹೀಗಾಗಿ, 40 ಅಂಕಗಳಿಗಿಂತ ಹೆಚ್ಚು ಅಥವಾ 20 ಅಂಕಗಳಿಗಿಂತ ಕಡಿಮೆ ಅಂಕ ನೀಡಿದರೆ ಕಾರಣ ದಾಖಲಿಸಬೇಕು’ ಎಂದು ಆಗ್ರಹಿಸಿ ಕೆಪಿಎಸ್‌ಸಿ ಕಾರ್ಯದರ್ಶಿಗೆ ಹಲವು ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ, ಸಂದರ್ಶನ ನಡೆಸುವ ಪ್ರಕ್ರಿಯೆಯ ಬಗ್ಗೆ ಸ್ಪಷ್ಟನೆ ಕೇಳಿ ಸರ್ಕಾರಕ್ಕೆ ಕೆಪಿಎಸ್‌ಸಿ ಕಾರ್ಯದರ್ಶಿ ಪತ್ರ ಬರೆದಿದ್ದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್‌) ಕಾರ್ಯದರ್ಶಿ ಹೇಮಲತಾ ಅವರು ಸಂದರ್ಶನ ಪ್ರಕ್ರಿಯೆಯನ್ನು ಹೇಗೆ ನಡೆಸಬೇಕೆಂಬ ಬಗ್ಗೆ ಶನಿವಾರ ಸ್ಪಷ್ಟೀಕರಣ ನೀಡಿದ್ದಾರೆ.

ADVERTISEMENT

‘ಇಡೀ ಪ್ರಕ್ರಿಯೆಯನ್ನು ಪಾರದರ್ಶಕತೆ ಮತ್ತು ನ್ಯಾಯೋಚಿತವಾಗಿ ನಡೆಸಲು ಮತ್ತು ನೈಸರ್ಗಿಕ ನ್ಯಾಯ ಒದಗಿಸುವ ಉದ್ದೇಶದಿಂದ ಆಯ್ಕೆ ಪ್ರಾಧಿಕಾರದ ಅಧ್ಯಕ್ಷರು (ಕೆಪಿಎಸ್‌ಸಿ) ನಾಲ್ಕು ಜನರನ್ನು ಒಳಗೊಂಡ ಸಂದರ್ಶಕ ಮಂಡಳಿಯನ್ನು ರಚಿಸಬೇಕು. ಈ ಮಂಡಳಿಯಲ್ಲಿ ಕೆಪಿಎಸ್‌ಸಿಯ ಇಬ್ಬರಿಗಿಂತ ಹೆಚ್ಚು ಸದಸ್ಯರು ಇರಬಾರದು. ಅತ್ಯಂತ ಹಿರಿಯ ಸದಸ್ಯರು ಮಂಡಳಿಯ ಅಧ್ಯಕ್ಷತೆ ವಹಿಸಬೇಕು. ಇತರ ಸದಸ್ಯರು ರಾಜ್ಯ ಸರ್ಕಾರದ ನಿವೃತ್ತ ಗ್ರೂಪ್‌ ‘ಎ’ ಅಧಿಕಾರಿಗಳು, ರಾಜ್ಯದ ವಿಶ್ವವಿದ್ಯಾಲಯಗಳ ನಿವೃತ್ತ ಉಪ ಕುಲಪತಿಗಳು ಅಥವಾ ಸಂಬಂಧಪಟ್ಟ ಕ್ಷೇತ್ರದಲ್ಲಿನ ರಾಜ್ಯದ ವಿಶ್ವವಿದ್ಯಾಲಯಗಳ ನಿವೃತ್ತ ಪ್ರೊಫೆಸರುಗಳು ಆಗಿರಬೇಕು.ಸಂದರ್ಶಕ ಮಂಡಳಿಯ ಎಲ್ಲ ನಾಲ್ವರು ಸದಸ್ಯರು ನೀಡುವ ಅಂಕಗಳ ಸರಾಸರಿಯನ್ನು ಸಂದರ್ಶನದಲ್ಲಿ ಅಭ್ಯರ್ಥಿ ಗಳಿಸಿದ ಒಟ್ಟು ಅಂಕವೆಂದು ಪರಿಗಣಿಸಬೇಕು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.