ADVERTISEMENT

ಜಮೀನಿನ ಖಾತೆ ಬದಲಾವಣೆಗೆ ₹ 5 ಲಕ್ಷ ಲಂಚ: ತಹಶೀಲ್ದಾರ್ ವರ್ಷಾ ಮನೆಯಲ್ಲಿ ದಾಖಲೆ ವಶ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 21:49 IST
Last Updated 16 ನವೆಂಬರ್ 2022, 21:49 IST
ವರ್ಷಾ ಒಡೆಯರ್‌
ವರ್ಷಾ ಒಡೆಯರ್‌   

ಬೆಂಗಳೂರು: ಜಮೀನಿನ ಖಾತೆ ಬದಲಾವಣೆ ಮಾಡಲು ₹ 5 ಲಕ್ಷ ಲಂಚ ಪಡೆಯುವಾಗ ಬಂಧಿತರಾಗಿದ್ದ ಬೆಂಗಳೂರು ಉತ್ತರ ತಾಲ್ಲೂಕಿನ ವಿಶೇಷ ತಹಶೀಲ್ದಾರ್‌ ವರ್ಷಾ ಒಡೆಯರ್‌ ಮನೆ ಮೇಲೆ ದಾಳಿ ಮಾಡಿ, ಶೋಧ ನಡೆಸಿರುವ ಲೋಕಾಯುಕ್ತ ಪೊಲೀಸರು, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ವರ್ಷಾ ಮತ್ತು ಅವರ ಪರವಾಗಿ ಲಂಚದ ಹಣ ಪಡೆದಿದ್ದ ಮಧ್ಯವರ್ತಿ ರಮೇಶ್‌ ಎಂಬುವವರನ್ನು ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಂಗಳೂರು ನಗರ ಘಟಕದ ಅಧಿಕಾರಿಗಳು ಮಂಗಳವಾರ ಸಂಜೆ ಬಂಧಿಸಿದ್ದರು. ಚಂದ್ರಾ ಬಡಾವಣೆಯ 60 ಅಡಿ ರಸ್ತೆಯಲ್ಲಿರುವ ತಹಶೀಲ್ದಾರ್‌ ಮನೆ ಮೇಲೆ ಮಂಗಳವಾರ ರಾತ್ರಿ ದಾಳಿ ಮಾಡಿದ ತನಿಖಾ ತಂಡದ ಅಧಿಕಾರಿಗಳು, ಶೋಧ ನಡೆಸಿದ್ದಾರೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ನ್ಯಾಯಾಂಗ ಬಂಧನಕ್ಕೆ:ಪ್ರಾಥಮಿಕ ತನಿಖೆ ಪೂರ್ಣಗೊಳಿಸಿ ಇಬ್ಬರೂ ಆರೋಪಿಗಳನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ಎದುರು ಬುಧವಾರ ಹಾಜರುಪಡಿಸಲಾಯಿತು. ವರ್ಷಾ ಮತ್ತು ರಮೇಶ್‌ ಅವರನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.