ADVERTISEMENT

Delhi Blast | ಸಿಎಂ ಸಿದ್ದರಾಮಯ್ಯ ತಮ್ಮ ಹೇಳಿಕೆ ಹಿಂಪಡೆಯಲಿ: ವಿಜಯೇಂದ್ರ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2025, 8:19 IST
Last Updated 12 ನವೆಂಬರ್ 2025, 8:19 IST
   

ಬೆಂಗಳೂರು: ದೆಹಲಿ ಕೆಂಪು ಕೋಟೆ ಮೆಟ್ರೊ ನಿಲ್ದಾಣದ ಬಳಿ ನಡೆದ ಸ್ಪೋಟಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ಸ್ಪೋಟಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಚುನಾವಣೆ ವೇಳೆಯಲ್ಲೇ ಏಕೆ ಸ್ಫೋಟಗಳು ಹೆಚ್ಚು ಎಂಬ ಬಗ್ಗೆ ಕೇಂದ್ರವೇ ಉತ್ತರಿಸಬೇಕು ಎಂದಿದ್ದರು.

ಈ ಹೇಳಿಕೆ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ವಿಜಯೇಂದ್ರ, ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ADVERTISEMENT

‘ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 12 ನಾಗರಿಕರು ಮೃತಪಟ್ಟು, ಹಲವರು ಗಾಯಗೊಂಡ ಭಯೋತ್ಪಾದಕ ಕೃತ್ಯದ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಬೇಜವಾಬ್ದಾರಿ, ಅಸಂವೇದನೀಯ, ಕೀಳು ರಾಜಕೀಯ ಹೇಳಿಕೆಗಳು ಖಂಡನೀಯ ಮಾತ್ರವಲ್ಲ ಆತಂಕಕಾರಿಯೂ ಆಗಿದೆ’ ಎಂದು ಕಿಡಿಕಾರಿದ್ದಾರೆ.

‘ಕಾಂಗ್ರೆಸ್ ಪಕ್ಷಕ್ಕೆ ದೇಶದ ಭದ್ರತೆ, ನಾಗರಿಕರ ಸಾವು-ನೋವುಗಳು, ನಮ್ಮ ಸೈನಿಕರ ತ್ಯಾಗ, ರಾಷ್ಟ್ರೀಯ ಗೌರವಗಳಂತಹ ವಿಷಯಗಳೂ ಕೂಡ ಕೇವಲ ರಾಜಕೀಯ ಅಸ್ತ್ರವಾಗಿರುವುದು ನಿಜಕ್ಕೂ ಆತಂಕಕಾರಿಯಾಗಿದೆ’ ಎಂದಿದ್ದಾರೆ.

‘2019ರ ಭೀಕರ ಪುಲ್ವಾಮಾ ದಾಳಿಯ ನಂತರವೂ ಕಾಂಗ್ರೆಸ್‌ ನಾಯಕರು, ಪಾಕಿಸ್ತಾನದ ಪ್ರಚಾರಕ್ಕೆ ಸಹಾಯವಾಗುವ ಹೇಳಿಕೆಗಳನ್ನು ನೀಡಿದ್ದನ್ನು ದೇಶ ಮರೆತಿಲ್ಲ. ಮುಖ್ಯಮಂತ್ರಿಗಳ ಈಗಿನ ಹೇಳಿಕೆ ಕೂಡ ಕಾಂಗ್ರೆಸ್‌ನ ಅದೇ ರಾಷ್ಟ್ರ ವಿರೋಧಿ ಪರಂಪರೆಯ ಮುಂದುವರಿಕೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಯುಪಿಎ ಅವಧಿಯಲ್ಲಿ (2004-2014) ಮುಂಬೈ ದಾಳಿ ಸೇರಿದಂತೆ ದೇಶದಲ್ಲಿ 45ಕ್ಕೂ ಅಧಿಕ ಬಾಂಬ್ ಸ್ಫೋಟ, ಉಗ್ರಕೃತ್ಯಗಳು ನಡೆದು ಸಾವಿರಾರು ಮಂದಿ ಸಾವನ್ನಪ್ಪಿದಾಗ, ಆಗಿನ ಅಸಮರ್ಥ ಕೇಂದ್ರ ಸರ್ಕಾರ ಪ್ರತಿ ಕ್ರಮಗಳೇನನ್ನೂ ತೆಗೆದುಕೊಳ್ಳದೆ ಇದ್ದಾಗಲೂ ದೇಶದ ಭದ್ರತೆ ವಿಷಯದಲ್ಲಿ ದೇಶ ಒಂದಾಗಿರಬೇಕೆಂದು ಆಗ ಪ್ರತಿಪಕ್ಷ ರಾಜಕೀಯ ನಡೆಸಲಿಲ್ಲ’ ಎಂದು ಹೇಳಿದ್ದಾರೆ.

‘ರಾಜ್ಯದ ಆಡಳಿತ ವೈಫಲ್ಯ, ಶೂನ್ಯ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ಮೇಲಿನ ಆರೋಪಗಳಿಗೆ ಉತ್ತರದಾಯಿಗಳಾಗಿರುವ ಮುಖ್ಯಮಂತ್ರಿಗಳು ಮತ್ತು ಆಡಳಿತ ಪಕ್ಷದ ನಾಯಕರು, ಜನರ ಗಮನ ಬೇರೆಡೆ ಸೆಳೆಯಲು ಹೀಗೆ ಅಗ್ಗದ ರಾಜಕೀಯ ತಂತ್ರವನ್ನು ಅನುಸರಿಸುತ್ತಿರುವುದು ಸರಿಯಲ್ಲ’ ಎಂದಿದ್ದಾರೆ.

‘ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು. ಕಾಂಗ್ರೆಸ್‌ನ ದೇಶ-ವಿರೋಧಿ, ಸಂವೇದನಾರಹಿತ, ಕೀಳು ರಾಜಕೀಯಕ್ಕೆ ಬಿಹಾರದ ಜನತೆ ಉತ್ತರ ನೀಡುತ್ತಿರುವಂತೆಯೇ ರಾಜ್ಯದ ಜನರೂ ಕೂಡ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.