ADVERTISEMENT

ಬನ್ನೇರುಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕಡಿತ: ರಾಜ್ಯ ಸರ್ಕಾರಕ್ಕೆ ಸಿಇಸಿ ತಪರಾಕಿ

ಮಂಜುನಾಥ್ ಹೆಬ್ಬಾರ್‌
Published 8 ಜನವರಿ 2026, 0:41 IST
Last Updated 8 ಜನವರಿ 2026, 0:41 IST
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ   

ನವದೆಹಲಿ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ಪ್ರದೇಶವನ್ನು (ಇಎಸ್‌ಝಡ್) 268 ಚದರ ಕಿ.ಮೀ.ನಿಂದ 168 ಚದರ ಕಿ.ಮೀ.ಗೆ ಇಳಿಸಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್‌ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ಕಟುವಾಗಿ ಟೀಕಿಸಿದ್ದು, ಈ ಕ್ರಮವು ಉದ್ಯಾನದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅಭಿಪ್ರಾಯಪಟ್ಟಿದೆ. 

ಪರಿಸರ ಸೂಕ್ಷ್ಮ ಪ್ರದೇಶವನ್ನು ಇಳಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಬೆಳ್ಳಿಯಪ್ಪ ಮತ್ತಿತರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಮಿತಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಸಮಿತಿಯು ಸುಪ್ರೀಂ ಕೋರ್ಟ್‌ಗೆ 524 ಪುಟಗಳ ವರದಿ ಸಲ್ಲಿಸಿದೆ. ಯಾವುದೇ ವೈಜ್ಞಾನಿಕ, ಪರಿಸರ ಅಥವಾ ಭೂದೃಶ್ಯ ಮಟ್ಟದ ಅಧ್ಯಯನ ಹಾಗೂ ಮೌಲ್ಯಮಾಪನ ನಡೆಸದೆಯೇ ಪರಿಸರ ಸೂಕ್ಷ್ಮ ಪ್ರದೇಶವನ್ನು ನಿರಂತರವಾಗಿ ಕಡಿತ ಮಾಡಲಾಗಿದೆ ಎಂದೂ ಸಮಿತಿ ತಿಳಿಸಿದೆ. 

ಪರಿಸರ ಸೂಕ್ಷ್ಮ ಪ್ರದೇಶದ ಪಕ್ಕದಲ್ಲೇ ಕರ್ನಾಟಕ ವಸತಿ ಇಲಾಖೆಯು ಸೂರ್ಯನಗರ ಲೇಔಟ್‌ (ಕೆಎಚ್‌ಬಿ ಸೂರ್ಯ ಸಿಟಿ) ಎಂಬ ಬೃಹತ್‌ ವಸತಿ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಈ ಪ್ರದೇಶವು ಮೊದಲು ಪರಿಸರ ಸೂಕ್ಷ್ಮ ಪ್ರದೇಶದ ಭಾಗವಾಗಿತ್ತು. ವಸತಿ ಬಡಾವಣೆಗಳ ನಿರ್ಮಾಣಕ್ಕೆ ನಿರ್ಬಂಧ ವಿಧಿಸಲಾಗಿತ್ತು. ನಗರೀಕರಣದ ಒತ್ತಡದ ನೆಪವೊಡ್ಡಿ 2018ರ ಅಧಿಸೂಚನೆಯಲ್ಲಿ ಈ ಪ್ರದೇಶವನ್ನು ಇಎಸ್‌ಝಡ್‌ನಿಂದ ಹೊರಗಿಡಲಾಯಿತು. ಆ ಬಳಿಕ, ವಸತಿ ಯೋಜನೆಯನ್ನು ಸುಗಮಗೊಳಿಸಲು ದೊಡ್ಡ ಪ್ರಮಾಣದ ಭೂ ಸಮತಟ್ಟು, ನೈಸರ್ಗಿಕವಾಗಿ ಎತ್ತರದ ಭೂಪ್ರದೇಶವನ್ನು ಸಮತಟ್ಟಾಗಿಸುವುದು ಸೇರಿದಂತೆ ವ್ಯಾಪಕ ಪ್ರಮಾಣದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. ಪರಿಸರ ಪರಿಣಾಮದ ಅಧ್ಯಯನ ಹಾಗೂ ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸದೆಯೇ ಈ ಕಾರ್ಯ ನಡೆಸಲಾಯಿತು. ಈ ಯೋಜನೆಯು ಕರಡಿಕ್ಕಲ್‌–ಮಾದೇಶ್ವರ ಕಾರಿಡಾರ್‌ನ ಪಕ್ಕದಲ್ಲಿಯೇ ಅನುಷ್ಠಾನಗೊಳ್ಳುತ್ತಿದೆ. ಈ ಭಾಗದಲ್ಲಿ ಈಗಾಗಲೇ ಮಾನವ–ವನ್ಯಜೀವಿ ಸಂಘರ್ಷ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ‘ ಎಂದು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ. 

ADVERTISEMENT

ಬೆಂಗಳೂರಿನ ಸುತ್ತಮತ್ತ ತ್ವರಿತ ನಗರ ವಿಸ್ತರಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಂಪ್ರದಾಯಿಕ ಆನೆ ಕಾರಿಡಾರ್‌ಗಳ ಅವನತಿಯಿಂದಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ದಕ್ಷಿಣ, ಪಶ್ಚಿಮ, ಆಗ್ನೇಯ ಮತ್ತು ನೈರುತ್ಯ ಭಾಗಗಳಲ್ಲಿ ಮಾನವ–ಆನೆ ಸಂಘರ್ಷ ಪ್ರಕರಣಗಳು ವ್ಯಾಪಕ ಪ್ರಮಾಣದಲ್ಲಿ ಜಾಸ್ತಿ ಆಗಿದೆ. ಸುಸ್ಥಿರ ಮಾನವ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಸಮತೋಲನದಿಂದ ಸಾಗಲು ಇಎಸ್‌ಝಡ್‌ಗಳು ನಿಯಂತ್ರಕಗಳಾಗಿ ಕೆಲಸ ಮಾಡುತ್ತವೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. 

ಶಿಫಾರಸುಗಳು

l 2020ರಲ್ಲಿ ಹೊರಡಿಸಿರುವ ಅಂತಿಮ
ಅಧಿಸೂಚನೆಯನ್ನು ಕೇಂದ್ರ ಅರಣ್ಯ ಸಚಿವಾಲಯ ಹಿಂಪಡೆಯಬೇಕು

l 2016ರ ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಿ
ದಂತೆ, ಇಎಸ್‌ಝಡ್‌ ವ್ಯಾಪ್ತಿ 268.96 ಚದರ
ಕಿ.ಮೀ. ಇರಬೇಕು. ದಟ್ಟವಾದ, ಬದಲಾಯಿ
ಸಲು ಆಗದ ನಗರಾಭಿವೃದ್ಧಿ ಚಟುವಟಿಕೆ ಇದ್ದಲ್ಲಿ ಮಾತ್ರ ಮಾರ್ಪಾಡು ಮಾಡಬಹುದು. ಆದರೆ, ಇದಕ್ಕೆ ವೈಜ್ಞಾನಿಕ ಪುರಾವೆಗಳೊಂದಿಗೆ ತಜ್ಞರ ಸಮಿತಿಯ ಲಿಖಿತ, ವಿವರವಾದ ಹಾಗೂ ತರ್ಕಬದ್ಧ ಸಮರ್ಥನೆ ಇರಬೇಕು

l ರಾಷ್ಟ್ರೀಯ ಉದ್ಯಾನದ ಪಕ್ಕದ ಅರಣ್ಯ
ಪ್ರದೇಶಗಳೊಂದಿಗೆ ಸಂಪರ್ಕಿಸುವ ಆನೆ ಕಾರಿಡಾರ್‌ಗಳ ನಿರಂತರ ಸಂರಕ್ಷಣೆ ಹಾಗೂ ಬಲಪಡಿಸುವಿಕೆ ಅಗತ್ಯ

l 6 ತಿಂಗಳೊಳಗೆ ಇಎಸ್‌ಝಡ್‌ ಮರು ಅಧಿಸೂಚನೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು

ಮೂರು ಆನೆ ಕಾರಿಡಾರ್‌ಗಳಿಗೆ ಧಕ್ಕೆ

l ಕರಡಿಕ್ಕಲ್-ಮಾದೇಶ್ವರ ಕಾರಿಡಾರ್: ಈ ಕಾರಿಡಾರ್ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಹೊಸೂರು ಅರಣ್ಯ ವಿಭಾಗದ ಕಡೆಗೆ ಮತ್ತು ನಂತರ ಕಾವೇರಿ ಭೂದೃಶ್ಯದವರೆಗೆ ಆನೆಗಳ ನಿಯಮಿತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಈ ಕಾರಿಡಾರ್ 6 ಕಂದಾಯ ಗ್ರಾಮಗಳನ್ನು ಹೊಂದಿದೆ. ಕಲ್ಲುಗಣಿಗಾರಿಕೆ, ರಾಜ್ಯ ಹೆದ್ದಾರಿ ಮತ್ತು ರೆಸಾರ್ಟ್‌ಗಳ ವ್ಯಾಪಕ ಹೆಚ್ಚಳದಿಂದ ಆನೆಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ನಿಷೇಧಕ್ಕೆ ತುರ್ತು ಕ್ರಮ ಅಗತ್ಯ.

l ಥಳ್ಳಿ–ಬಿಳಿಕಲ್‌ ಕಾರಿಡಾರ್: ಈ ಅಂತರ್-ರಾಜ್ಯ ಕಾರಿಡಾರ್ ಮೂಲಕ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮತ್ತು ಉತ್ತರ ಕಾವೇರಿ ವನ್ಯಜೀವಿ ಅಭಯಾರಣ್ಯದ ನಡುವೆ 100-200 ಆನೆಗಳು ಸಂಚರಿಸುತ್ತವೆ. ಈ ಕಾರಿಡಾರ್ ಏಳು ಕಂದಾಯ ಗ್ರಾಮಗಳ ಮೂಲಕ ಹಾದು ಹೋಗುತ್ತದೆ. ಈ ಭಾಗದಲ್ಲಿ ರಸ್ತೆಗಳು, ವಿದ್ಯುತ್‌ ಮಾರ್ಗಗಳು, ಆನೆ ತಡೆ ಬೇಲಿಗಳು ಹಾಗೂ ಒತ್ತುವರಿ ಹೆಚ್ಚಾಗಿದೆ. ಆದರೂ, ಈ ಭಾಗದಲ್ಲಿ ಆನೆಗಳ ಸಂಚಾರ ಜಾಸ್ತಿ ಆಗಿದೆ. ಒತ್ತುವರಿ ತೆರವುಗೊಳಿಸಿ ಈ ಪ್ರದೇಶದ ಸಂರಕ್ಷಣೆಗೆ ಆದ್ಯತೆ ಕೊಡಬೇಕು. 

l ಬಿಳಿಕಲ್‌–ಜವಳಗಿರಿ ಕಾರಿಡಾರ್ (ಅಂತರ್‌-ರಾಜ್ಯ): ಬಿಳಿಕ್ಕಲ್ ರಾಜ್ಯ ಅರಣ್ಯವನ್ನು ಜವಳಗಿರಿ ಮೀಸಲು ಅರಣ್ಯದೊಂದಿಗೆ ಸಂಪರ್ಕಿಸುವ ಈ ಕಾರಿಡಾರ್‌ನಲ್ಲಿ ಸುಮಾರು 200 ಆನೆಗಳಿವೆ. ಈ ಪ್ರದೇಶವು ಕಂದಾಯ ಗ್ರಾಮಗಳನ್ನು ಹೊಂದಿಲ್ಲ. ಆದಾಗ್ಯೂ, ರಸ್ತೆಗಳು ಮತ್ತು ಧಾರ್ಮಿಕ ಕೇಂದ್ರಗಳಿಂದಾಗಿ ಆನೆಗಳ ಸಂಚಾರಕ್ಕೆ ಅಡೆತಡೆ ಸೃಷ್ಟಿಯಾಗುತ್ತಿದೆ. ಆವಾಸಸ್ಥಾನ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. 

ಅರಣ್ಯ ಸಚಿವರ ನೇತೃತ್ವದಲ್ಲೇ ಕಡಿತಕ್ಕೆ ನಿರ್ಧಾರ

ಅರಣ್ಯ ಸಚಿವರ ನೇತೃತ್ವದ ಸಚಿವ ಸಂಪುಟ ಉಪಸಮಿತಿಯು 2017ರ ಫೆಬ್ರುವರಿ 10ರಂದು ಸಭೆ ಸೇರಿ ಇಎಸ್‌ಝಡ್‌ ಗಡಿ ಕಡಿತಗೊಳಿಸುವ ತೀರ್ಮಾನ ತೆಗೆದುಕೊಂಡಿತ್ತು. ಪಿಸಿಸಿಎಫ್‌ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ತಜ್ಞರ ಸಮಿತಿ ರಚಿಸಿ ವರದಿ ಪಡೆಯಬೇಕಿತ್ತು. ಈ ವರದಿಯನ್ನು ಕೇಂದ್ರ ಅರಣ್ಯ ಸಚಿವಾಲಯಕ್ಕೆ ಕಳುಹಿಸಬೇಕಿತ್ತು. ಆದರೆ, ರಾಜ್ಯ ಸರ್ಕಾರವು ಇಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಇಎಸ್‌ಝಡ್‌ ಕಡಿತ ಪರಿಷ್ಕೃತ ಪ್ರಸ್ತಾವನೆಯು ಅರಣ್ಯ ಸಚಿವಾಲಯದ 2011ರ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆ ಎಂದು ಸಿಇಸಿ ಅಭಿಪ್ರಾಯಪಟ್ಟಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.