ADVERTISEMENT

'ಪ್ರಜಾವಾಣಿ' ವರದಿ ಉಲ್ಲೇಖಿಸಿ ಸಿ.ಟಿ. ರವಿಗೆ ತಿರುಗೇಟು ನೀಡಿದ ಎಚ್‌ಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2021, 6:50 IST
Last Updated 6 ಅಕ್ಟೋಬರ್ 2021, 6:50 IST
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ರಾಜಕೀಯ ಕಾರಣಕ್ಕೆ ಆರ್‌ಎಸ್‌ಎಸ್‌ ದೂಷಿಸುವುದನ್ನು ಬಿಟ್ಟು ಸಂಘದ ಶಾಖೆಗೆ ಬಂದು ಅಲ್ಲಿನ ಸಿದ್ಧಾಂತಗಳನ್ನು ಅಧ್ಯಯನ ಮಾಡಿ’ಎಂದು ಟೀಕಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್‌ಗಳ ಮೂಲಕ ತಿರುಗೇಟು ನೀಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂಥ ಆಪರೇಷನ್ ಕಮಲದಂಥ ಅನೈತಿಕ, ನಿರ್ಲಜ್ಜ, ನೀಚ ರಾಜಕಾರಣವನ್ನು ಆರೆಸ್ಸೆಸ್ ಶಾಖೆಯಲ್ಲೇ ಕಲಿಸಲಾಯಿತಾ ಎಂಬುದನ್ನೂ ನೀವು ಜನರಿಗೆ ಹೇಳಬೇಕು ಸಿ.ಟಿ.ರವಿಯವರೇ?

ಜನರು ಕಣ್ಣೀರಿನಲ್ಲಿ ಕೈತೊಳೆಯುತ್ತಿದಾರೆ. ಇವತ್ತಿನ ಪ್ರಜಾವಾಣಿ ಪತ್ರಿಕೆ ಓದಿ. ಅದರಲ್ಲಿ ‘ಬದುಕು ಸಾಕೆನಿಸಿದೆ-ಭಗವಂತನಿಗೂ ಕರುಣೆ ಇಲ್ಲ’ಎನ್ನುವ ವರದಿ ಇದೆ. ಬೆಂಗಳೂರಿನ ಶ್ರೀನಿವಾಸನಗರದ ಬಿ.ಆರ್.ವಾಸುದೇವ ಎಂಬ ಬೀದಿ ಬದಿ ವ್ಯಾಪಾರಿ ಹೇಳಿರುವ ಮಾತುಗಳನ್ನು ಒಮ್ಮೆ ಓದಿ. ಆಗಲಾದರೂ ನಿಮ್ಮ ಕಲ್ಲು ಹೃದಯ ಕರಗಬಹುದು ಎಂದಿದ್ದಾರೆ.

ADVERTISEMENT

ಸಿ.ಟಿ. ರವಿ ಅವರೇ, ಮನೆಯಲ್ಲಿ ಕೂತು ಪುಸ್ತಕ ಓದಿದರೆ ಸಾಲದು ಎಂದಿದ್ದೀರಿ. ಆರೆಸ್ಸೆಸ್ ಬಗ್ಗೆ ಜ್ಞಾನಾರ್ಜನೆ, ಅಧ್ಯಯನ, ಸಂಶೋಧನೆ ಮಾಡಲು ಸಂಘದ ಶಾಖೆಗೆ ಬನ್ನಿ ಎಂದು ನನಗೆ ಆಹ್ವಾನ ಕೊಟ್ಟಿದ್ದೀರಿ. ಆದರೆ, ನಿಮ್ಮ ಸಂಘದೊಳಗಿನ ವಾಸ್ತಾವಾಂಶಗಳನ್ನು ಪ್ರತ್ಯಕ್ಷವಾಗಿ ನೋಡಿದವರೇ ಬರೆದ ಪುಸ್ತಕ ಓದಿ ನನಗೆ ಅಲ್ಲಿನ ವ್ಯವಹಾರಗಳ ವಿರಾಟ್ ದರ್ಶನ ಆಗಿದೆ. ಇನ್ನು ಶಾಖೆಯನ್ನೇ ಸೇರಿಕೊಂಡರೆ ಇನ್ನೆಷ್ಟು ಸತ್ಯ ಸಂಗತಿಗಳು ಗೊತ್ತಾಗಬಹುದು. ನೀವೇ ಒಮ್ಮೆ ಊಹಿಸಿ ಎಂದು ಎಚ್‌ಡಿಕೆ ವ್ಯಂಗ್ಯ ಮಾಡಿದ್ದಾರೆ.

ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದೀರಿ. ನಿಮ್ಮ ಪಕ್ಷ ಮತ್ತು ನಿಮ್ಮ ಸರಕಾರದಲ್ಲಿ ತಾಂಡವವಾಡುತ್ತಿರುವ ಅಪರಿಮಿತ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತದ ಬಗ್ಗೆಯೂ ನೀವು ಹೇಳಬೇಕು. ಅದಕ್ಕೂ ಆರೆಸ್ಸೆಸ್ ಶಾಖೆಯಲ್ಲೇ ತರಬೇತಿ ನೀಡಲಾಯಿತಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ 2,000 ರೂ. ಪರಿಹಾರ ಪಡೆಯಲು 100 ರೂ. ಲಂಚ ಕೇಳಿದ ವರದಿಗಳು ಬಂದಿವೆ. ಇದಾ ನಿಮ್ಮ ಸಮಾಜ ಸೇವೆ? ಛಿದ್ರವಾದ ಬದುಕುಗಳನ್ನೊಮ್ಮೆ ನೋಡಿ. ಜನರ ಬವಣೆಗಳ ಬಗ್ಗೆ ಆರೆಸ್ಸೆಸ್ ಶಾಖೆಗಳಲ್ಲಿ ನಿಮಗೆಲ್ಲರಿಗೂ ಏನನ್ನೂ ಹೇಳಿಕೊಡುವುದಿಲ್ಲವಾ ಸಿ.ಟಿ.ರವಿಯವರೇ?

ಸೇವೆಯ ಸೋಗಿನಲ್ಲಿ ಸಂಸ್ಥೆಗಳು ರಾಜಕೀಯ ಮಾಡಬಾರದು. ಜನರ ಬವಣೆಗಳ ನಿವಾರಣೆ ನಿಟ್ಟಿನಲ್ಲಿ ದುಡಿಯಬೇಕೆ ಹೊರತು ಬದುಕಿಗೇ ಬೆಂಕಿ ಇಡಬಾರದು. ಸಮಾಜದ ಶಾಂತಿಯನ್ನು ಕಾಪಾಡಬೇಕೇ ಹೊರತು, ಅದಕ್ಕೆ ಕೊಳ್ಳಿ ಇಡಬಾರದು. ಆರ್‌ಎಸ್ಎಸ್ ಹುಟ್ಟಿದಾಗಿನಿಂದಲೂ ಏನೆಲ್ಲ ಮಾಡಿಕೊಂಡು ಬಂದಿದೆ ಎನ್ನುವುದು ಜಗತ್ತಿಗೇ ಗೊತ್ತಿರುವ ಸಂಗತಿ.

ಜನ ಪ್ರತಿನಿಧಿಗಳನ್ನು, ಸರಕಾರಗಳನ್ನು, ಆಡಳಿತ ಯಂತ್ರಾಂಗವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಪರಿಪಾಠ ದೇಶಕ್ಕೆ ಒಳ್ಳೆಯದಲ್ಲ. ಅರ್ಥ ಮಾಡಿಕೊಳ್ಳಿ ಸಿ.ಟಿರವಿಯರೇ. ನಾನು ಸತ್ಯದ ಪರ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.