ADVERTISEMENT

ಹರ್ಷ ಹತ್ಯೆ ಪ್ರಕರಣ: ಎನ್‌ಐಎ ವಶಕ್ಕೆ ಹೋಗಲು ನಿರಾಕರಣೆ

ಜೈಲಿನಲ್ಲಿ ಆರೋಪಿಗಳ ಹೈಡ್ರಾಮಾ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 19:02 IST
Last Updated 27 ಏಪ್ರಿಲ್ 2022, 19:02 IST

ಬೆಂಗಳೂರು: ‘ರಂಜಾನ್‌ ಉಪವಾಸ ಮುಗಿಸುವತನಕ ನಾವು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ವಶಕ್ಕೆ ಹೋಗುವುದಿಲ್ಲ’ ಎಂದುಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಐವರು ಆರೋಪಿಗಳು ಜೈಲಿನಲ್ಲಿ ಗೋಡೆ, ಕಿಟಕಿಗಳಿಗೆ ತಲೆ ಜಜ್ಜಿಕೊಂಡು, ಪೆಟ್ಟು ಮಾಡಿಕೊಂಡು ಹೈಡ್ರಾಮಾ ಸೃಷ್ಟಿಸಿದ ಪ್ರಸಂಗ ಬುಧವಾರ ನಡೆದಿದೆ.

ಆರೋಪಿಗಳಾದ ರಿಹಾನ್ ಶರೀಫ್‌, ಮೊಹಮದ್‌ ಖ್ವಾಸಿಫ್‌, ಅಸೀಫ್‌ ಉಲ್ಲಾ ಖಾನ್, ಸೈಯ್ಯದ್‌ ಫಾರೂಕ್‌ ಮತ್ತು ರೋಷಲ್‌ ಅವರನ್ನು ಎನ್‌ಐಎ ಪೊಲೀಸರ ವಶಕ್ಕೆ ನೀಡಿ ನಗರದ ಎನ್‌ಐಎ ವಿಶೇಷ ನ್ಯಾಯಾಲಯ ಮಂಗಳವಾರ (ಏ.26) ಆದೇಶಿಸಿತ್ತು. ಇದರನ್ವಯ ಎನ್‌ಐಎ ಅಧಿಕಾರಿಗಳು, ಆರೋಪಿಗಳನ್ನು ವಶಕ್ಕೆ ಪಡೆಯಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾಗ ಆರೋಪಿಗಳು ಸುತಾರಾಂ ನಿರಾಕರಿಸಿದ್ದಾಗಿ ಮೂಲಗಳು ತಿಳಿಸಿವೆ.

‘ನಾವು ಉಪವಾಸ ಇದ್ದೇವೆ, ಬರುವುದಿಲ್ಲ ಎಂದು ಏಕಾಏಕಿ ಜೈಲಿನ ಗೋಡೆ, ಕಿಟಕಿಗಳಿಗೆ ತಲೆ ಗುದ್ದಿಕೊಂಡಿದ್ದಾರೆ. ಕಿಟಕಿಯಒಡೆದ ಗಾಜಿನ ಚೂರುಗಳಿಂದ ಮೈ–ಕೈಗಳಿಗೆ ಗೀರಿ ಗಾಯ ಮಾಡಿಕೊಂಡು, ನಾವು ಎನ್‌ಐಎ ವಶಕ್ಕೆ ಹೋಗುವುದಿಲ್ಲ ಎಂದು ಹಟ ಹಿಡಿದರು. ನಂತರ ಕಾರಾಗೃಹದ ಮುಖ್ಯಅಧೀಕ್ಷಕರ ಮೂಲಕ ನ್ಯಾಯಾಧೀಶರಿಗೆ, ‘ಎನ್‌ಐಎ ಕಸ್ಟಡಿಗೆ ಹೋಗುವುದಿಲ್ಲ‘ ಎಂದು ಲಿಖಿತ ಮನವಿ ಸಲ್ಲಿಸಿದರು ಎಂದು ‘ಪ್ರಜಾವಾಣಿ‘ಗೆ ವಿವರಿಸಿವೆ.

ADVERTISEMENT

ಒಂದು ಹಂತದಲ್ಲಿ ಜೈಲಿನ ಅಧೀಕ್ಷಕರು ಆರೋಪಿ
ಗಳ ಹಟವನ್ನೇ ಪುರಸ್ಕರಿಸಲು ಮುಂದಾದಾಗ, ಎನ್‌ಐಎ ಅಧಿಕಾರಿಗಳು, ‘ಇದು ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗಲಿದೆ, ನೀವೇ ಜವಾಬ್ದಾರರಾಗುತ್ತೀರಿ’ ಎಂದು ಮೌಖಿಕವಾಗಿ ಎಚ್ಚರಿಸಿದರು. ಆಗ ಆರೋಪಿಗಳನ್ನು ಅಧಿಕಾರಿಗಳು ಎನ್‌ಐಎ ವಶಕ್ಕೆ ಒಪ್ಪಿಸಿದರು ಎಂದು ಗೊತ್ತಾಗಿದೆ.

ಏಕೆ ಎನ್‌ಐಎ ಭಯ?: ‘ರಾಜ್ಯದಲ್ಲಿ 2016 ರಿಂದ ಎನ್‌ಐಎ ತನಿಖೆ ನಡೆಸುತ್ತಿರುವ ಪ್ರಕರಣಗಳಲ್ಲಿ ಅಂದಾಜು 100ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳು ಜೈಲಿನಲ್ಲಿದ್ದಾರೆ. ಇವರಲ್ಲಿ ಬೆರಳೆಣಿಕೆಯಷ್ಟು ಆರೋಪಿಗಳಿಗೆ ಮಾತ್ರವೇ ಜಾಮೀನು ಸಿಕ್ಕಿದೆ. ಅನೇಕರು ಸುಪ್ರೀಂ ಕೋರ್ಟ್‌ವರೆಗೂ ಜಾಮೀನಿಗಾಗಿ ಹೋರಾಟ ನಡೆಸಿದ್ದರೂ ಯಶಸ್ವಿಯಾಗಿಲ್ಲ. ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ–1967 ಅತ್ಯಂತ ಕಠಿಣವಾಗಿದ್ದು ಆರೋಪಿಗಳಿಗೆ ಜಾಮೀನು ಸಿಗುವುದು ಸುಲಭವಲ್ಲ’ ಎಂಬುದು ಕಾನೂನು ತಜ್ಞರ ಅಭಿಪ್ರಾಯ. ಶಿವಮೊಗ್ಗದಲ್ಲಿ 2022ರ ಫೆಬ್ರುವರಿ 20ರಂದು ಹತ್ಯೆಯಾದ ಹರ್ಷ ಕೊಲೆ ಪ್ರಕರಣದ ಆರೋಪಿಗಳಿಗೆ ವಿಶೇಷ ನ್ಯಾಯಾಲಯ ಮೇ 2ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.