ಹೊಸಪೇಟೆ (ವಿಜಯನಗರ): ಧರ್ಮಸ್ಥಳ ವಿಚಾರದಲ್ಲಿ ಲವ್ ಜಿಹಾದ್ ಮಾದರಿಯ ಮತಾಂತರ ಜಿಹಾದ್ ಇದ್ದಂತಿದೆ. ಹಿಂದೂ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಸೇರಿಸಲು ಹೊರಟಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದರು.
ಸೋಮವಾರ ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಹಿಂದೂ ದೇವಾಲಯಗಳೇ ಇವರ ಗುರಿ. ಚರ್ಚ್, ಮಸೀದಿ ಕಡೆ ಇವರು ಹೋಗುವುದಿಲ್ಲ. ಇದರ ಹಿಂದೆ ದೊಡ್ಡ ಪಡೆಯೇ ಇದೆ. ಮಾಸ್ಕ್ ಮ್ಯಾನ್, ಸುಜಾತಾ ಭಟ್ ಇವರೆಲ್ಲ ಇದರ ಪಾತ್ರಧಾರಿಗಳು’ ಎಂದರು.
ಮಾಸ್ಕ್ ಹಾಕಿಸಿದ್ದೇ ಸರ್ಕಾರ: ‘ದೂರು ಸಾಕ್ಷಿದಾರನಿಗೆ ಮಾಸ್ಕ್ ಹಾಕಿಸಿದ್ದೇ ಸರ್ಕಾರ. ಸಿಎಂ ಸಿದ್ದರಾಮಯ್ಯ ಅವರಿಗೆ ನಿಕಟರಾದ ಪ್ರಗತಿಪರರು ಇದರ ಹಿಂದೆ ಇದ್ದಾರೆ. ಬುರುಡೆ ಕಥೆ ಹೊರ ಬಂದ ಕೂಡಲೇ ಪ್ರಗತಿಪರರು ಕಾಣೆಯಾಗಿದ್ದಾರೆ’ ಎಂದು ಅಶೋಕ ಲೇವಡಿ ಮಾಡಿದರು.
‘ಎಸ್‌ಐಟಿಗೆ ಸರ್ಕಾರ ಎರಡ್ಮೂರು ಕೋಟಿ ಖರ್ಚು ಮಾಡಿದೆ. ಯಾವನೋ ಒಬ್ಬ ದಾರಿಯಲ್ಲಿ ಹೋಗುವವನ ಮಾತು ಕೇಳಿ ಎಸ್ಐಟಿ ರಚನೆ ಮಾಡಿದ್ದಾರೆ. ಮಾಸ್ಕ್ ಮ್ಯಾನ್ ಮುಸುಕು ತೆಗೆಯಿರಿ ಎಂದು ನಾನು ಎರಡು ಬಾರಿ ಹೇಳಿದ್ದೆ. ಅಂದೇ ಅವನ ಮುಸುಕು ತೆಗೆಸಿದ್ದರೆ ಅವನು ಎಂತಾ ಕಳ್ಳ ಎಂಬುದು ಗೊತ್ತಾಗುತ್ತಿತ್ತು. ಅವನೊಬ್ಬ ಮತಾಂತರಿ ಎಂದು ಗೊತ್ತಾಗಿದೆ. ಇದರ ಹಿಂದೆ ದೊಡ್ಡ ಗ್ಯಾಂಗ್ ಇದೆ’ ಎಂದು ಅವರು ಹೇಳಿದರು.
ಭಾರತ ಪಾಕಿಸ್ತಾನ ಆಗ್ತಿತ್ತು: ‘ಆರ್‌ಎಸ್‌ಎಸ್ ಇರಲಿಲ್ಲವಾಗಿದ್ದರೆ ಭಾರತ ಪಾಕಿಸ್ತಾನ ಆಗಿರುತ್ತಿತ್ತು. ಈಗಾಗಲೇ ಎರಡು ಪಾಕಿಸ್ತಾನಗಳು ಸೃಷ್ಟಿಯಾಗಿವೆ. ಆರ್‌ಎಸ್‌ಎಸ್‌ಗೆ ದೇಶಭಕ್ತಿ ಇದೆ, ಹೀಗಾಗಿ ಭಾರತವು ಉಳಿದುಕೊಂಡಿದೆ. ಡಿ.ಕೆ.ಶಿವಕುಮಾರ್ ಅವರಿಗೆ ದೇಶ ಭಕ್ತಿ ಇರುವುದರಿಂದಲೇ ಆರ್‌ಎಸ್‌ಎಸ್ ಗೀತೆಯನ್ನು ಅವರು ಹೇಳಿದ್ದಾರೆ’ ಎಂದು ಅಶೋಕ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.