ADVERTISEMENT

ಮತಾಂತರಗೊಂಡವರು ಕ್ರೈಸ್ತರೇ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 1:19 IST
Last Updated 13 ಸೆಪ್ಟೆಂಬರ್ 2025, 1:19 IST
<div class="paragraphs"><p>ಸಿದ್ದರಾಮಯ್ಯ&nbsp;, ಮುಖ್ಯಮಂತ್ರಿ</p></div>

ಸಿದ್ದರಾಮಯ್ಯ , ಮುಖ್ಯಮಂತ್ರಿ

   

converters are christian

ಬೆಂಗಳೂರು: ಕುರುಬ, ಬ್ರಾಹ್ಮಣ, ಲಿಂಗಾಯತ, ದಲಿತ, ವೈಶ್ಯ ಮತ್ತ ಒಕ್ಕಲಿಗರಲ್ಲಿ ಯಾರೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರೂ ಅವರೆಲ್ಲರೂ ಕ್ರೈಸ್ತರೇ ಆಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ADVERTISEMENT

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮೀಕ್ಷಾ ಕೈಪಿಡಿ ಬಿಡುಗಡೆ ಮಾಡಿ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮತಾಂತರಗೊಂಡವ‌ರ ಧರ್ಮವನ್ನು ಉಲ್ಲೇಖಿಸುವಾಗ ಅವರ ಮೂಲ ಜಾತಿಯ ಹೆಸರು ಸೇರಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆಯಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಮತಾಂತರಗೊಂಡವರು ಕ್ರೈಸ್ತರೇ ಆಗುತ್ತಾರೆ’ ಎಂದರು.

‘ಸಮೀಕ್ಷೆಗೆ ಬಂದಾಗ ಏನು ಬರೆಯುತ್ತಾರೋ ಬರೆಯಲಿ. ಮತಾಂತರಗೊಂಡವರು ಅಥವಾ ಜಾತಿ–ಧರ್ಮದ ಹೆಸರಿನ ಗೊಂದಲ ಇದ್ದರೆ ಅದನ್ನು ಹಿಂದುಳಿದ ವರ್ಗಗಳ ಆಯೋಗ ವಿಶ್ಲೇಷಣೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ. ನಾವು ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿ ಮಾತ್ರ ಸಂಗ್ರಹಿಸುತ್ತಿದ್ದೇವೆ’ ಎಂದು ಹೇಳಿದರು.

‘ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿದ್ದ ಜಾತಿ ಪಟ್ಟಿಯಲ್ಲಿ ಕುರುಬ ಕ್ರಿಶ್ಚಿಯನ್‌. ಕುಂಬಾರ ಕ್ರಿಶ್ಚಿಯನ್‌, ಮಡಿವಾಳ ಕ್ರಿಶ್ಚಿಯನ್‌, ನೇಕಾರ ಕ್ರಿಶ್ಚಿಯನ್‌ ಸೇರಿ 100 ಕ್ಕೂ ಹೆಚ್ಚು ಜಾತಿಗಳನ್ನು ಕ್ರಿಶ್ಚಿಯನ್‌ ಧರ್ಮದ ಹೆಸರಿನಲ್ಲಿ ಸೇರಿಸಲಾಗಿದೆ’ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.

‘ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರು ನಮ್ಮ ಜಾತಿಯೊಳಗೆ ನುಸುಳಿ ನಮ್ಮ ಪಾಲಿನ ಮೀಸಲಾತಿಯನ್ನು ಕಬಳಿಸುವ ಹುನ್ನಾರಕ್ಕೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆ. ಸರ್ಕಾರ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಕ್ಯಾಥೋಲಿಕ್‌, ಪ್ರೊಟೆಸ್ಟಂಟ್‌, ಪೆಂಟಕೋಸ್ಟ್‌ ಇತ್ಯಾದಿ ಮೂಲ ಕ್ರೈಸ್ತ ಪಂಗಡಗಳ ಹೆಸರೇ ಇಲ್ಲ. ಅವರಿಗೆ ಕೇವಲ ಕ್ರೈಸ್ತರೆಂದು ಗುರುತಿಸಿಕೊಳ್ಳಲು ಅವಕಾಶ ನೀಡಿದೆ’ ಎಂದು ಬಿಜೆಪಿ ನಾಯಕರು ದೂರಿದ್ದರು.

‘ಈ ರೀತಿಯ ಜಾತಿ ಪಟ್ಟಿಗಳು ಸರ್ಕಾರದ ಅಧಿಕೃತ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿ ಪಟ್ಟಿಯಲ್ಲಿ ಇವೆಯೇ? ಈ ಪಟ್ಟಿ ಕಾಂತರಾಜ, ನಾಗಮೋಹನದಾಸ್‌ ಸಮೀಕ್ಷೆಯಲ್ಲಿ ಏಕೆ ಇರಲಿಲ್ಲ. ಯಾವ ಉದ್ದೇಶದಿಂದ ಈಗ ಈ ರೀತಿ ಕ್ರೈಸ್ತ ಜಾತಿಗಳನ್ನು ಸೇರಿಸಲಾಗಿದೆ. ತಕ್ಷಣ ಈ ಪಟ್ಟಿ ಕೈಬಿಡಬೇಕು’ ಎಂದು ಬಿಜೆಪಿ ನಾಯಕರ ನಿಯೋಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್‌ ಅವರನ್ನು ಒತ್ತಾಯಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.