ADVERTISEMENT

ರೆಮ್‌ಡಿಸಿವಿರ್‌ ದಂಧೆ: ಮೂವರ ಬಂಧನ

ಕೇರಳದಿಂದ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ

​ಪ್ರಜಾವಾಣಿ ವಾರ್ತೆ
Published 26 ಮೇ 2021, 22:16 IST
Last Updated 26 ಮೇ 2021, 22:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ಸೋಂಕಿತರಿಗೆ ನೀಡುವ ರೆಮ್‌ಡಿಸಿವಿರ್‌ ಚುಚ್ಚುಮದ್ದಿನವಯಲ್ಸ್‌ಗಳನ್ನು ಕೇರಳದಿಂದ ಕಡಿಮೆ ಬೆಲೆಗೆ ಖರೀದಿಸಿ, ಬೆಂಗಳೂರಿನಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದ ಮೂವರು ಆರೋಪಿಗಳನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದ ಸಂಜೀವ್ ಕುಮಾರ್ (32), ಪ್ರತೀಕ್ (37) ಹಾಗೂ ಅಭಿಜಿತ್‌ (20) ಬಂಧಿತರು.

ಆರೋಪಿಗಳು ರೆಮ್‌ಡಿಸಿವಿರ್ ಲಸಿಕೆಯ ವಯಲ್ಸ್‌ಗಳನ್ನು ಕೇರಳದಿಂದ ತರಿಸಿಕೊಳ್ಳುತ್ತಿದ್ದರು. ನಗರದಲ್ಲಿ ಅಗತ್ಯವಿದ್ದರನ್ನು ಸಂಪರ್ಕಿಸಿ ಒಂದು ವಯಲ್ಸ್‌ ಚುಚ್ಚುಮದ್ದನ್ನು ತಲಾ ₹10 ಸಾವಿರದಂತೆ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ 25 ವಯಲ್ಸ್‌ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಮೊಬೈಲ್ ಮೂಲಕ ದಂಧೆ: ‘ಆರೋಪಿಗಳು ಅಕ್ರಮವಾಗಿ ರೆಮ್‌ಡಿಸಿವಿರ್‌ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಸೋಮವಾರ ಖಚಿತ ಮಾಹಿತಿ ಬಂದಿತ್ತು. ಇದಕ್ಕಾಗಿ ಪೊಲೀಸ್‌ ಸಿಬ್ಬಂದಿಯೊಬ್ಬರು ಔಷಧ ಖರೀದಿಸುವ ನೆಪದಲ್ಲಿ ಆರೋಪಿ ಸಂಜೀವ್ ಕುಮಾರ್‌ನನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು’.

‘ಈ ವೇಳೆ ಪ್ರತೀಕ್‌ನೊಂದಿಗೆ ಮಾತನಾಡುವಂತೆಸಂಜೀವ್‌ ಮೊಬೈಲ್ ನಂಬರ್‌ ನೀಡಿದ್ದ. ಪ್ರತೀಕ್‌ ಒಂದು ವಯಲ್ಸ್‌ಗೆ ₹10 ಸಾವಿರ ಎಂದು ದರ ನಿಗದಿ ಪಡಿಸಿದ್ದ. ಮತ್ತೊಬ್ಬ ವ್ಯಕ್ತಿಯಿಂದ ಚುಚ್ಚುಮದ್ದು ತಲುಪಿಸುವುದಾಗಿಯೂ ತಿಳಿಸಿದ್ದ. ಈ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದಾಗ ಮೂವರೂ ಸಿಕ್ಕಿಬಿದ್ದರು’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.