ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯಿಂದ ಷೋಕಾಸ್ ನೋಟಿಸ್ ಪಡೆದಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಸಮಿತಿಯ ಅಧ್ಯಕ್ಷ ಓಂ ಪಾಠಕ್ ಅವರನ್ನು ಗುರುವಾರ ಇಲ್ಲಿ ಭೇಟಿ ಮಾಡಿ ವಿವರಣೆ ನೀಡಿದರು.
‘ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ನಾವು ಕಾರಣರಲ್ಲ. ನಾವೇ ಕಾರಣ ಎಂದು ಅನಗತ್ಯವಾಗಿ ಬಿಂಬಿಸಲಾಗುತ್ತಿದೆ. ನಾವು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ’ ಎಂದು ರೇಣುಕಾಚಾರ್ಯ ಹಾಗೂ ಜಿಲ್ಲೆಯ ಮುಖಂಡರು ಸಮಜಾಯಿಷಿ ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಸೋತಿದ್ದರು. ಈ ಸೋಲಿಗೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಬೆಂಬಲಿಗರೇ ಕಾರಣ ಎಂದು ಬಿಜೆಪಿ ಭಿನ್ನಮತೀಯ ನಾಯಕರು ಆರೋಪಿಸಿದ್ದರು. ಕ್ಷೇತ್ರದಲ್ಲಿ ಬಿಜೆಪಿ ಸೋತಿದ್ದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಾಜ್ಯದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಆರು ವರ್ಷಗಳಿಗೆ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಅದರ ಬೆನ್ನಲ್ಲೇ, ರೇಣುಕಾಚಾರ್ಯ ಅವರನ್ನು ಪಕ್ಷದಿಂದ ಹೊರದಬ್ಬಬೇಕು ಎಂದು ಭಿನ್ನಮತೀಯ ನಾಯಕರು ಒತ್ತಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.