ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 9:53 IST
Last Updated 14 ಆಗಸ್ಟ್ 2025, 9:53 IST
ದರ್ಶನ್‌
ದರ್ಶನ್‌   

ನವದೆಹಲಿ: ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ‌ಹಾಗೂ ಇತರ ಆರೋಪಿಗಳ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ.

ದರ್ಶನ್ ಅವರಿಗೆ ನಿಯಮಿತ ಜಾಮೀನು ನೀಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಅರ್ಜಿಯ ಸಲ್ಲಿಸಿತ್ತು.

ಜುಲೈ 24ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ದರ್ಶನ್ ಮತ್ತು ಇತರೆ ಆರು ಆರೋಪಿಗಳಿಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್‌ ಕ್ರಮಕ್ಕೆ ಛೀಮಾರಿ ಹಾಕಿತ್ತು.

ADVERTISEMENT

'ಆದೇಶ ಹೊರಡಿಸಿದ ರೀತಿ ನೋಡಿದರೆ ಇದು ಖುಲಾಸೆಗೊಳಿಸುವ ಪ್ರಕರಣ ಎಂದು ನ್ಯಾಯಾಲಯ ನಿರ್ಧರಿಸಿದಂತೆ ಕಾಣುತ್ತಿದೆ' ಎಂದು ಕಟುವಾಗಿ ಟೀಕಿಸಿತ್ತು.

ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳ ವಶಕ್ಕೆ SC ನಿರ್ದೇಶನ

ರೇಣುಕಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳ ಜಾಮೀನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್‌, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಗುರುವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ಆರ್‌. ಮಹದೇವನ್‌ ಅವರಿದ್ದ ಪೀಠ, ಕರ್ನಾಟಕ ಹೈಕೋರ್ಟ್‌ ಆದೇಶದಲ್ಲಿ ಹಲವು ನ್ಯೂನತೆಗಳಿವೆ ಎಂದು ಹೇಳಿ ಜಾಮೀನು ರದ್ದುಗೊಳಿಸಿದೆ.

ಆರೋಪಿಯಾಗಿರುವ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳನ್ನು ಕೂಡಲೇ ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಪೀಠ, ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

'ನಾವು ಎಲ್ಲ ವಿಚಾರಗಳನ್ನೂ ಪರಿಗಣಿಸಿದ್ದೇವೆ. ಹೈಕೋರ್ಟ್‌ ಆದೇಶವು ಗಂಭೀರ ದೌರ್ಬಲ್ಯಗಳಿಂದ ಕೂಡಿರುವುದು ಸ್ಪಷ್ಟವಾಗಿದೆ' ಎಂದು ಹೇಳಿದೆ.

'ನಿಖರ ಆರೋಪಗಳು ಮತ್ತು ವಿಧಿವಿಜ್ಞಾದನ ಪ್ರಯೋಗಾಲಯದ ಹಲವು ಸಾಕ್ಷ್ಯಗಳು ಜಾಮೀನು ರದ್ದುಗೊಂಡಿರುವುದೇಕೆ ಎಂಬುದನ್ನು ಸಮರ್ಥಿಸುತ್ತವೆ. ಈ ಪ್ರಕರಣದ ವಿಚಾರಣೆ ನಡೆಸಲು ವಿಚಾರಣಾ ನ್ಯಾಯಾಲಯವೇ ಸೂಕ್ತ. ಆರೋಪಿಗಳಿಗೆ ನೀಡಿರುವ ಜಾಮೀನನ್ನು ರದ್ದು ಮಾಡಲಾಗಿದೆ' ಎಂದು ಪೀಠ ಹೇಳಿದೆ.

ಆರೋಪಿಯು ಎಷ್ಟೇ ದೊಡ್ಡವರಾಗಿದ್ದರೂ ಕಾನೂನಿಗಿಂತ ದೊಡ್ಡವರಲ್ಲ ಎಂಬ ಸಂದೇಶವನ್ನು ಈ ಆದೇಶ ಸಾರುತ್ತದೆ ಎಂದು ನ್ಯಾ. ಜೆ.ಬಿ. ಪಾರ್ದೀವಾಲ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.