ನವದೆಹಲಿ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ನಿಯಮಿತ ಜಾಮೀನು ನೀಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಗುರುವಾರ ತನ್ನ ತೀರ್ಪು ಪ್ರಕಟಿಸಲಿದೆ.
ಆಗಸ್ಟ್ 14ರಂದು ಬೆಳಿಗ್ಗೆ 10.30ಕ್ಕೆ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ತೀರ್ಪು ನೀಡಲಿದೆ.
ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್ ಪ್ರಕಾರ, ನ್ಯಾಯಮೂರ್ತಿ ಮಹಾದೇವನ್ ಪೀಠದ ಪರವಾಗಿ ತೀರ್ಪು ಪ್ರಕಟಿಸುವರು.
ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ವಕೀಲರಾದ ಅನಿಲ್ ಸಿ. ನಿಶಾನಿ ಮತ್ತು ಡಿ.ಎಲ್. ಚಿದಾನಂದ ಅವರ ಮೂಲಕ ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ತೀರ್ಪನ್ನು ನ್ಯಾಯಾಲಯ ಜುಲೈ 24ರಂದು ಕಾಯ್ದಿರಿಸಿತ್ತು.
ದರ್ಶನ್ ಮತ್ತು ಇತರೆ ಆರು ಆರೋಪಿಗಳಿಗೆ ಜಾಮೀನು ನೀಡಿರುವ ಹೈಕೋರ್ಟ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ‘ಆದೇಶ ಹೊರಡಿಸಿದ ರೀತಿ ನೋಡಿದರೆ ಇದು ಖುಲಾಸೆಗೊಳಿಸುವ ಪ್ರಕರಣ ಎಂದು ನ್ಯಾಯಾಲಯ ನಿರ್ಧರಿಸಿದಂತೆ ಕಾಣುತ್ತಿದೆ’ ಎಂದು ಕಟುವಾಗಿ ಟೀಕಿಸಿತ್ತು.
ಜುಲೈ 17ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಪೀಠವು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತನ್ನ ವಿವೇಚನಾ ಅಧಿಕಾರವನ್ನು ಬಳಕೆ ಮಾಡಿರುವ ರೀತಿಯು ಸ್ವಲ್ಪವೂ ಒಪ್ಪುವಂತಿಲ್ಲ’ ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.