ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಪ್ರದೂಷ್ ವಿರುದ್ಧದ ಆರೋಪ ಕೈಬಿಡಲು ಹೈಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 14:10 IST
Last Updated 10 ಫೆಬ್ರುವರಿ 2026, 14:10 IST
   

ಬೆಂಗಳೂರು: 'ನಿಮ್ಮ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟೇ ತಿರಸ್ಕರಿಸಿರುವಾಗ ದೋಷಾರೋಪಗಳಿಂದ ಕೈಬಿಡಬೇಕು ಎಂದು ಹೇಗೆ ತಾನೇ ಕೋರುತ್ತೀರಿ’ ಎಂದು ಹೈಕೋರ್ಟ್‌, ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗೆ ಪ್ರಶ್ನಿಸಿದೆ.

‘ಈ ಪ್ರಕರಣದಲ್ಲಿ ಪೊಲೀಸರು ನನ್ನ ವಿರುದ್ಧ ಹೊರಿಸಿರುವ, ಕೊಲೆ ಮತ್ತು ಕೊಲೆ ಅಪರಾಧದ ಜಂಟಿ ಹೊಣೆಗಾರಿಕೆ ಆರೋಪಗಳಿಂದ ಕೈಬಿಡಲು ವಿಚಾರಣಾ ಕೋರ್ಟ್‌ಗೆ ನಿರ್ದೇಶಿಸಬೇಕು’ ಎಂದು ಕೋರಿ 14ನೇ ಆರೋಪಿ ಪ್ರದೂಷ್ ಎಸ್‌.ರಾವ್ ಅಲಿಯಾಸ್ ಪ್ರದೂಷ್‌ ಸಲ್ಲಿಸಿದ್ದ ಕ್ರಿಮಿನಲ್‌ ಪುನರ್‌ ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರದೂಷ್‌ ಪರ ಪದಾಂಕಿತ ಹಿರಿಯ ವಕೀಲ ಕೆ.ದಿವಾಕರ ಅವರು, ’ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ ತಿಂಗಳಿಂದಲೇ ಸಂಚು ರೂಪಿಸಲಾಗಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ. ಆ ದಿನಗಳಲ್ಲಿ ಅರ್ಜಿದಾರರದ್ದು ಯಾವುದೇ ಪಾತ್ರವಿಲ್ಲ. ಘಟನೆಯ ಅಂತಿಮ ಭಾಗದಲ್ಲಿ ಅವರು ಇದ್ದರು ಮತ್ತು  ₹30 ಲಕ್ಷ ಮೊತ್ತವನ್ನು ದರ್ಶನ್‌ ಕಡೆಯಿಂದ ಪಡೆದು ಬೇರೆಯವರಿಗೆ ವರ್ಗಾಯಿಸಿದ್ದರು ಎಂದು ಆರೋಪಿಸಲಾಗಿದೆ. ಹಾಗಾಗಿ, ಅರ್ಜಿದಾರರ ವಿರುದ್ಧದ ದೋಷಾರೋಪಗಳನ್ನು ಪೂರ್ಣವಾಗಿ ಕೈಬಿಡದಿದ್ದರೂ ಅಲ್ಪಮಟ್ಟಿಗೆ ಸಡಿಲಿಸಬೇಕು’ ಎಂದು ಕೋರಿದರು.

ADVERTISEMENT

ಇದಕ್ಕೆ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್, ‘ಪ್ರದೂಷ್‌ ಇತರೆ ಆರೋಪಿಗಳಿಗೆ ಪ್ರಚೋದನೆ ನೀಡಿದ್ದಾರೆ. ಕೊಲೆಯಲ್ಲಿ ಭಾಗಿಯಾಗಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಸಾಕ್ಷಿ ವಿಚಾರಣೆಯಲ್ಲಿ ಅರ್ಜಿದಾರರ ಪಾತ್ರದ ಬಗ್ಗೆ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 164ರ ಅಡಿಯಲ್ಲಿ ನೀಡಲಾದ ಹೇಳಿಕೆಯಲ್ಲಿ ಇದನ್ನೆಲ್ಲಾ ಸಾದ್ಯಂತವಾಗಿ ವಿವರಿಸಲಾಗಿದೆ. ಅಷ್ಟಕ್ಕೂ, ಸುಪ್ರೀಂ ಕೋರ್ಟ್‌ ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ನ್ಯಾಯಪೀಠ, ‘ಸುಪ್ರೀಂ ಕೋರ್ಟ್‌ ನಿಮ್ಮ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆಯಲ್ಲವೇ? ಪ್ರಾಸಿಕ್ಯೂಷನ್‌ ಬಳಿ ಅರ್ಜಿದಾರರನ್ನು ವಿಚಾರಣೆಗೆ ಒಳಪಡಿಸುವಷ್ಟು ಪ್ರಮಾಣದ ಸಾಕ್ಷ್ಯಧಾರಗಳು ಇವೆಯಲ್ಲಾ? ಹಾಗಾಗಿ, ಈ ಕೋರ್ಟ್‌ ಅದಕ್ಕಿಂತಲೂ ಒ‌ಂದು ಪರ್ಸೆಂಟ್ ಕೂಡಾ ಹೆಚ್ಚು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ಆದ್ದರಿಂದ, ಅರ್ಜಿ ವಾಪಸು ಪಡೆಯುವುದು ಒಳಿತು. ಇಲ್ಲವೇ ವಜಾಗೊಳಿಸಲಾವುದು’ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.

ಈ ಹಿನ್ನೆಲೆಯಲ್ಲಿ ಅರ್ಜಿದಾರರ ಪರ ವಕೀಲರು ಅರ್ಜಿ ವಾಪಸು ಪಡೆಯಲು ಸಮ್ಮತಿ ಸೂಚಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿದಾರರಿಗೆ ಸೂಕ್ತ ಕಾನೂನಿನ ಆಧಾರದಡಿ ಮುಂದುವರಿಯಲು ಸ್ವಾತಂತ್ರ್ಯ ನೀಡಿ ಅರ್ಜಿ ವಿಲೇವಾರಿ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.