ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಆರೋಪಿಗಳ ಮನೆ ಊಟಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 23:20 IST
Last Updated 20 ಜನವರಿ 2026, 23:20 IST
<div class="paragraphs"><p>ಮೃತ&nbsp;ರೇಣುಕಾಸ್ವಾಮಿ, ನಟ ದರ್ಶನ್‌, ಪವಿತ್ರಾ ಗೌಡ</p></div>

ಮೃತ ರೇಣುಕಾಸ್ವಾಮಿ, ನಟ ದರ್ಶನ್‌, ಪವಿತ್ರಾ ಗೌಡ

   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಆರೋಪಿಗಳಾಗಿ ಜೈಲಿನಲ್ಲಿರುವ ಪವಿತ್ರಾ ಗೌಡ, ನಾಗರಾಜ್‌ ಮತ್ತು ಲಕ್ಷ್ಮಣ್‌ಗೆ ವಾರಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡಿದ್ದ ಸೆಷನ್ಸ್‌ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿದೆ.

‘ವಾರಕ್ಕೊಮ್ಮೆ ಮನೆ ಊಟಕ್ಕೆ ಅವಕಾಶ ಕಲ್ಪಿಸಿ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ 2026ರ ಇದೇ 12ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌, ‘ಜೈಲು ಆಹಾರ ಗುಣಮಟ್ಟದ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ (ಎಫ್‌ಎಸ್‌ಎಸ್‌ಎಐ) ಪ್ರಾಧಿಕಾರ ನಾಲ್ಕು ಸ್ಟಾರ್‌ ಪ್ರಮಾಣಪತ್ರ ನೀಡಿದೆ. ವೈದ್ಯರು ಸೂಚಿಸಿದರೆ ಮಾತ್ರವೇ ಮನೆ ಊಟಕ್ಕೆ ಅವಕಾಶ  ಮಾಡಿಕೊಡಲಾಗುತ್ತದೆ. ಆರೋಪಿಗಳಿಗೆ ಯಾವುದೇ ವಿಶೇಷ ಸೌಲಭ್ಯ ನೀಡಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ, ಈ ಪ್ರಕರಣದಲ್ಲಿ ಮೂವರು ಆರೊಪಿಗಳಿಗೆ ವಾರಕೊಮ್ಮೆ ಮನೆ ಊಟ ತರಿಸಿಕೊಳ್ಳುವುದಕ್ಕೆ ಸೆಷನ್ಸ್‌ ನ್ಯಾಯಾಲಯ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಿದ್ದು ಈ ಆದೇಶಕ್ಕೆ ತಡೆ ನೀಡಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ವಕೀಲ ಎಸ್‌.ಸುನಿಲ್ ಕುಮಾರ್, ‘ಕೈದಿಯೊಬ್ಬರಿಗೆ ದಿನವೊಂದರ ಊಟಕ್ಕೆ ₹85 ಖರ್ಚು ಮಾಡಲಾಗುತ್ತಿದೆ. ಜೈಲಿನಲ್ಲಿ ಗುಣಮಟ್ಟದ ಊಟ ದೊರೆಯುತ್ತಿಲ್ಲ. ಅಂತೆಯೇ, ಬೇರೊಂದು ಪ್ರಕರಣದಲ್ಲಿ ಕೈದಿಗೆ ಮನೆ ಊಟ ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಆ ಆದೇಶವನ್ನು ಪ್ರಾಸಿಕ್ಯೂಷನ್‌ ಪ್ರಶ್ನಿಸಿಲ್ಲ. ಈ ಕುರಿತ ವಿವರಗಳನ್ನು ನ್ಯಾಯಪೀಠಕ್ಕೆ ಒದಗಿಸುತ್ತೇನೆ. ಈ ಪ್ರಕರಣದಲ್ಲಿ ಪವಿತ್ರಾ ಗೌಡ ಹೃದ್ರೋಗದಿಂದ ಬಳಲುತ್ತಿದ್ದು ಮನೆ ಊಟಕ್ಕೆ ಅವಕಾಶ ನೀಡಬೇಕು’ ಎಂದು ಕೋರಿದರು.

ವಾದ–‍ಪ್ರತಿವಾದ ಆಲಿಸಿದ ನ್ಯಾಯಪೀಠ ಸೆಷನ್ಸ್‌ ಕೋರ್ಟ್‌ ಆದೇಶಕ್ಕೆ ತಡೆ ನೀಡಿತು. ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.