ನವದೆಹಲಿ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಆಕ್ಷೇಪ ವ್ಯಕ್ತಪಡಿಸಿದೆ.
ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು, ‘ಹೈಕೋರ್ಟ್ ತನ್ನ ವಿವೇಚನೆ ಚಲಾಯಿಸಿದ ರೀತಿ ತನಗೆ ಮನದಟ್ಟಾಗಿಲ್ಲ’ ಎಂದು ಹೇಳಿತು.
ಜಾಮೀನು ಆದೇಶದಲ್ಲಿ ಪೀಠವು ಮಧ್ಯಪ್ರವೇಶ ಮಾಡಬಾರದು ಎಂಬುದಕ್ಕೆ ಬಲವಾದ ಕಾರಣಗಳನ್ನು ನೀಡುವಂತೆ ನಟನ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ನ್ಯಾಯಪೀಠವು ಕೇಳಿತು. ಬಳಿಕ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿತು.
‘ನಿಮ್ಮಲ್ಲಿ ಪ್ರಾಮಾಣಿಕವಾಗಿ ಹೇಳುವುದಾದರೆ ಹೈಕೋರ್ಟ್ ಯಾವ ರೀತಿ ತನ್ನ ವಿವೇಚನೆ ಬಳಸಿದೆ ಎಂಬುದು ಮನದಟ್ಟಾಗಿಲ್ಲ. ತುಂಬಾ ಪ್ರಾಮಾಣಿಕವಾಗಿ ನಾವಿದನ್ನು ಹೇಳುತ್ತೇವೆ’ ಎಂದು ಪೀಠವು ಸಿಬಲ್ ಅವರಿಗೆ ತಿಳಿಸಿತು.
‘ನಿಮ್ಮ ಕಕ್ಷಿದಾರರು ಜಾಮೀನು ಪಡೆದಿದ್ದಾರೆ. ಆದರೆ, ಹೈಕೋರ್ಟ್ ಯಾವ ರೀತಿ ಆದೇಶ ನೀಡಿದೆ ಎಂಬುದನ್ನು ನೀವು ನೋಡಿರಬೇಕು. ಹೀಗಾಗಿ ನಿಮ್ಮ ವಾದವನ್ನು ನಾವು ಆಲಿಸುತ್ತೇವೆ’ ಎಂದು ಪೀಠ ಹೇಳಿತು.
ಪೊಲೀಸರು ಮತ್ತು ನ್ಯಾಯಾಲಯ ದಾಖಲಿಸಿದ ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸುವಂತೆ ಸಿಬಲ್ ಅವರು ಪೀಠವನ್ನು ಕೇಳಿದರು.
ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆಗಳಿವೆಯೇ ಎಂದು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರನ್ನು ನ್ಯಾಯಪೀಠ ಪ್ರಶ್ನಿಸಿತು. ಅಂತಹ ವಿವರಗಳನ್ನು ಮುಂದಿನ ವಿಚಾರಣೆಯಲ್ಲಿ ಪ್ರಸ್ತುತಪಡಿಸುವಂತೆ ನ್ಯಾಯಾಲಯ ಸೂಚಿಸಿತು.
‘ಈ ವಿಷಯವು ಪೂರ್ವಾಪರಗಳನ್ನು ಮಾತ್ರವಲ್ಲದೆ ಜಾಮೀನು ಪಡೆದ ನಂತರದಲ್ಲಿ ಆರೋಪಿಯ ನಡವಳಿಕೆಯನ್ನೂ ಒಳಗೊಂಡಿದೆ’ ಎಂದು ಲೂತ್ರಾ ತಿಳಿಸಿದರು. ‘ಜಾಮೀನು ಪಡೆದ ಬಳಿಕ ದರ್ಶನ್ ಅವರು ಪ್ರಕರಣದ ಪ್ರಮುಖ ಸಾಕ್ಷಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಇಂತಹ ನಡವಳಿಕೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಹುದು’ ಎಂದರು.
ಇದಕ್ಕೆ ಸಿಬಲ್ ಪ್ರತಿಕ್ರಿಯಿಸಿ, ಆ ವ್ಯಕ್ತಿ ಪ್ರಮುಖ ಸಾಕ್ಷಿಯಲ್ಲ ಎಂದು ಹೇಳಿದರು. ‘ಅವರು ಪ್ರಮುಖ ಸಾಕ್ಷಿಯಲ್ಲ ಎಂದು ನೀವು ಹೇಳುತ್ತಿದ್ದೀರಿ. ಹಾಗಿದ್ದರೆ, ಪ್ರಮುಖ ಸಾಕ್ಷಿಯನ್ನು ಯಾವ ರೀತಿ ವ್ಯಾಖ್ಯಾನಿಸುತ್ತೀರಿ’ ಎಂದು ಲೂತ್ರಾ ಪ್ರಶ್ನಿಸಿದರು.
ದರ್ಶನ್, ಪವಿತ್ರಾಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್ ಹಾಗೂ ಜಗದೀಶ್ ಅವರಿಗೆ ಹೈಕೋರ್ಟ್ ನಿಯಮಿತ ಜಾಮೀನು ಮಂಜೂರು ಮಾಡಿತ್ತು. ಉಳಿದ ಹತ್ತು ಮಂದಿ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
2024ರ ಜೂನ್ 8ರಂದು ಚಿತ್ರದುರ್ಗದ ರೇಣುಕಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ ಆರೋಪದಡಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.