ADVERTISEMENT

ಗೃಹ ಸಚಿವರಿಗೆ ಗಣರಾಜ್ಯ ಧ್ವಜಾರೋಹಣ ಭಾಗ್ಯ ಇಲ್ಲ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 20:14 IST
Last Updated 23 ಜನವರಿ 2019, 20:14 IST
   

ಬೆಂಗಳೂರು: ಜಿಲ್ಲೆಗಳಲ್ಲಿನ ಗಣರಾಜ್ಯೋತ್ಸವ ಧ್ವಜಾರೋಹಣ ಜವಾಬ್ದಾರಿಯನ್ನು ಸಚಿವರಿಗೆ ಹಂಚಿಕೆ ಮಾಡಿ ಬುಧವಾರ ಆದೇಶ ಹೊರಡಿಸಲಾಗಿದೆ. ಆದರೆ, ವಿಜಯಪುರ ಜಿಲ್ಲೆ ಪ್ರತಿನಿಧಿಸುವ ಗೃಹ ಸಚಿವ ಎಂ.ಬಿ. ಪಾಟೀಲರಿಗೆ ಯಾವುದೇ ಜಿಲ್ಲೆಯನ್ನೂ ನೀಡಿಲ್ಲ.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ. ಕೆಲವು ಜಿಲ್ಲೆಗಳನ್ನು ಪ್ರತಿನಿಧಿಸುವ ಸಚಿವರು ಇಲ್ಲದೇ ಇದ್ದುದರಿಂದ ಕೆಲವರಿಗೆ ಎರಡು ಜಿಲ್ಲೆಗಳ ಉಸ್ತುವಾರಿಗಳನ್ನು ನೀಡಲಾಗಿದೆ. ಸಂಪುಟಕ್ಕೆ ಕಾಂಗ್ರೆಸ್‌ ಪ್ರತಿನಿಧಿಸುವ ಆರು ಸಚಿವರು ಸೇರ್ಪಡೆಯಾದ ಬಳಿಕ ಜಿಲ್ಲಾ ಉಸ್ತುವಾರಿಯನ್ನು ಹಂಚಿಕೆ ಮಾಡಿಲ್ಲ.

ಸಂಪುಟ ವಿಸ್ತರಣೆಗೆ ಮುನ್ನ ಇದ್ದ ಜಿಲ್ಲೆಗಳ ಉಸ್ತುವಾರಿಯನ್ನು ಬಿಡಲು ಸಚಿವರು ಒಪ್ಪದೇ ಇರುವುದರಿಂದ ಮೈತ್ರಿ ಸರ್ಕಾರದಲ್ಲಿ ಗೊಂದಲ ಉಂಟಾಗಿದೆ. ಇದು ಸದ್ಯಕ್ಕೆ ಬಗೆಹರಿಯುವಂತೆ ಕಾಣಿಸುತ್ತಿಲ್ಲ. ಆದರೆ, ಗಣರಾಜ್ಯೋತ್ಸವ ಧ್ವಜಾರೋಹಣದ ಜವಾಬ್ದಾರಿಯನ್ನು ವಹಿಸಬೇಕಿರುವ ಹಿನ್ನೆಲೆಯಲ್ಲಿ, ಹೊಣೆ ಹಂಚಿಕೆ ಮಾಡಲಾಗಿದೆ.

ADVERTISEMENT

ವಿಜಯಪುರ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರಿಗೆ ನೀಡಲಾಗಿದೆ. ಗೃಹ ಸಚಿವರಾದ ಎಂ.ಬಿ. ಪಾಟೀಲರಿಗೆ ಯಾವುದೇ ಜಿಲ್ಲೆಯ ಜವಾಬ್ದಾರಿಯನ್ನೂ ವಹಿಸಿಲ್ಲ. ವಿಜಯಪುರ ಜಿಲ್ಲೆ ಪ್ರತಿನಿಧಿಸುವ ಮತ್ತೊಬ್ಬ ಸಚಿವ ಶಿವಾನಂದ ಪಾಟೀಲರಿಗೆ ಬಾಗಲಕೋಟೆ ಹೊಣೆಯನ್ನು ನೀಡಲಾಗಿದೆ. ಬಾಗಲಕೋಟೆ ಜಿಲ್ಲೆ ಪ್ರತಿನಿಧಿಸುವ ಆರ್.ಬಿ. ತಿಮ್ಮಾಪೂರ ಅವರಿಗೆ ಗದಗ ಜಿಲ್ಲೆ ಹೊಣೆ ವಹಿಸಲಾಗಿದೆ.

ಬಳ್ಳಾರಿ ಜಿಲ್ಲೆಯನ್ನು ಬಿಟ್ಟುಕೊಡಲು ಸಚಿವ ಡಿ.ಕೆ. ಶಿವಕುಮಾರ್ ಸಿದ್ಧರಿರಲಿಲ್ಲ. ಆದರೆ, ಧ್ವಜಾರೋಹಣ ಜವಾಬ್ದಾರಿಯನ್ನು ಅದೇ ಜಿಲ್ಲೆ ಪ್ರತಿನಿಧಿಸುವ ಈ. ತುಕಾರಾಂಗೆ ನೀಡಲಾಗಿದೆ.

ಜಮೀರ್ ಅಹಮದ್ ಖಾನ್‌ಗೆ ಹಾವೇರಿ, ಸಿ.ಎಸ್. ಶಿವಳ್ಳಿಗೆ ಧಾರವಾಡ, ಎಂ.ಟಿ.ಬಿ. ನಾಗರಾಜ್ ಅವರಿಗೆ ಬೆಂಗಳೂರು ಗ್ರಾಮಾಂತರ, ರಹೀಂ ಖಾನ್‌ಗೆ ಕೊಪ್ಪಳ ಜಿಲ್ಲೆಗಳ ಜವಾಬ್ದಾರಿಯನ್ನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.