ಬೆಂಗಳೂರು: ಕರ್ನಾಟಕಕ್ಕೆ ಅಗತ್ಯವಿರುವ 2.67 ಲಕ್ಷ ಟನ್ ಯೂರಿಯಾ ಗೊಬ್ಬರವನ್ನು ಪೂರೈಕೆ ಮಾಡುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರು ಎಲ್ಲ ರಾಜ್ಯಗಳ ಕೃಷಿ ಸಚಿವರ ಜತೆ ನಡೆಸಿದ ವಿಡಿಯೊ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 2025-26ನೇ ಸಾಲಿನಲ್ಲಿ ಹಂಚಿಕೆ ಮಾಡಿರುವಷ್ಟು ಪ್ರಮಾಣದಲ್ಲಿ ರಸಗೊಬ್ಬರ ಬಾರದೆ ಕರ್ನಾಟಕದಲ್ಲಿ ಯೂರಿಯಾ ಕೊರತೆಯಾಗಿದೆ. ಬಾಕಿ ಇರುವ ಗೊಬ್ಬರವನ್ನು ತ್ವರಿತವಾಗಿ ಕಳುಹಿಸಿಕೊಡಬೇಕು ಎಂದರು.
ಕರ್ನಾಟಕದಲ್ಲಿ ಮುಂಗಾರು ವಿಕಸಿತ ಕೃಷಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಜುಲೈ ತಿಂಗಳಿಗೆ 1.27 ಲಕ್ಷ ಟನ್ ಯೂರಿಯಾ ಮತ್ತು ಆಗಸ್ಟ್‌ಗೆ 1.40 ಲಕ್ಷ ಟನ್ ಯೂರಿಯಾ ಕೊರತೆ ಇದೆ. ಒಟ್ಟಾರೆ 2.67 ಲಕ್ಷ ಟನ್ ಯೂರಿಯಾ ಬೇಕಿದೆ. ಕೊರತೆ ವಿಚಾರ ಕರ್ನಾಟಕ ವಿಧಾನಸಭೆ, ವಿಧಾನಪರಿಷತ್ ಕಲಾಪಗಳಲ್ಲೂ ಗಂಭೀರ ಚರ್ಚೆ ನಡೆದಿವೆ. ಕೇಂದ್ರದ ಹಂಚಿಕೆ ಮತ್ತು ಪೂರೈಕೆ ಪ್ರಮಾಣದ ಬಗ್ಗೆ ಸದನಕ್ಕೂ ಮನವರಿಕೆ ಮಾಡಲಾಗಿದೆ ಎಂದು ವಿವರ ನೀಡಿದರು.
ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತನೆ ಕಾರ್ಯ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಬಹುತೇಕ ಬೆಳೆಗಳಿಗೆ ಮೇಲುಗೊಬ್ಬರವಾಗಿ ಯೂರಿಯಾ ಬಳಸುತ್ತಾರೆ. ರೈತರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ರಸಗೊಬ್ಬರವನ್ನು ಪೂರೈಸಬೇಕಿದೆ. ವಿಳಂಬವಾದರೆ ಬೆಳೆಗೆ ಹಾನಿಯಾಗುವ ಸಂಭವವಿದೆ. ಹಿಂಗಾರಿಗೂ ಅಗತ್ಯವಿರುವ ಗೊಬ್ಬರ ಹಂಚಿಕೆ ಮಾಡಬೇಕು. ರಾಜ್ಯದಲ್ಲಿ ಯಶಸ್ವಿಯಾಗಿ ರಬಿ ವಿಕಸಿತ ಕೃಷಿ ಅಭಿಯಾನ ನಡೆಯುತ್ತಿದೆ. ಸೆ.15 ಮತ್ತು 16ರಂದು ನಡೆಯುವ ರಬಿ (ಹಿಂಗಾರು) ಸಮ್ಮೇಳನದಲ್ಲಿ ಭಾಗವಹಿಸಲಾಗುವುದು ಎಂದು ಹೇಳಿದರು.
‘ರಸಗೊಬ್ಬರ ಇಲಾಖೆ ಕಾರ್ಯದರ್ಶಿ ಜತೆ ಮಾತನಾಡಿ ಕರ್ನಾಟಕಕ್ಕೆ ಬಾಕಿ ರಸಗೊಬ್ಬರ ಪೂರೈಕೆಯ ವ್ಯವಸ್ಥೆ ಮಾಡಲಾಗುವುದು’ ಎಂದು ಶಿವರಾಜ್‌ಸಿಂಗ್ ಚವ್ಹಾಣ್ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.