ADVERTISEMENT

'ಕೌಶಲ ಅಭಿವೃದ್ಧಿ ಕಾಲೇಜಿಗೆ ಜಮೀನು ಕೊಡಿ'

ಉಸ್ತುವಾರಿ ಸಚಿವರಿಗೆ ಜಿಲ್ಲಾ ವಾಣಿಜ್ಯ- ‌ಕೈಗಾರಿಕೆ ಸಂಸ್ಥೆಯ ಮನವಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 8:05 IST
Last Updated 24 ಅಕ್ಟೋಬರ್ 2018, 8:05 IST
ಬಳ್ಳಾರಿ ವಾಣಿಜ್ಯ ಕೈಗಾರಿಕಾ ಸಂಸ್ಥೆಯ ಮುಖಂಡರೊಡನೆ ಜಿಲ್ಲಾ ಉಸ್ತುವಾರಿ ಸಚಿವ ‌ಡಿ.ಕೆ.ಶಿವಕುಮಾರ್ ಸಭೆ
ಬಳ್ಳಾರಿ ವಾಣಿಜ್ಯ ಕೈಗಾರಿಕಾ ಸಂಸ್ಥೆಯ ಮುಖಂಡರೊಡನೆ ಜಿಲ್ಲಾ ಉಸ್ತುವಾರಿ ಸಚಿವ ‌ಡಿ.ಕೆ.ಶಿವಕುಮಾರ್ ಸಭೆ   

ಬಳ್ಳಾರಿ:ಕೌಶಲ ಅಭಿವೃದ್ಧಿ ಕಾಲೇಜಿಗೆ‌ ಅನುದಾನ ಮತ್ತು ಜಮೀನು ಕೊಡಿ ಎಂಬ‌ ಮನವಿಗೆ‌ ಯಾರೂ ಸ್ಪಂದಿಸುತ್ತಿಲ್ಲ‌ ಎಂದು ಜಿಲ್ಲಾ ವಾಣಿಜ್ಯ ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಡಾ.ರಮೇಶ್ ಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ‌ಡಿ.ಕೆ.ಶಿವಕುಮಾರ್ ಅವರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು,ಸಂಸ್ಥೆಯು ಈಗಾಗಲೇ 42 ಮಂದಿಗೆ ಕೌಶಲ ತರಬೇತಿ ನೀಡಿದೆ.‌ ಜಮೀನು ಕೊಡಬೇಕೆಂದು ಜಿಲ್ಲಾಧಿಕಾರಿ‌ಗಳು ಆದೇಶ ನೀಡಿದ್ದರೂ ಪ್ರಯೋಜನವಾಗಿಲ್ಲ. ಪಾಲಿಕೆ ಮತ್ತು ಜಿಲ್ಲಾ ಕೈಗಾರಿಕೆ ಕೇಂದ್ರಕ್ಕೆ ಎರಡೂವರೆ ವರ್ಷದಿಂದ ಅಲೆದಾಡುತ್ತಿದ್ದೇವೆ ಎಂದರು.

600 ಮಂದಿಗೆ ತರಬೇತಿ ನೀಡಲು ಸಂಸ್ಥೆ ಸಿದ್ಧವಾಗಿದೆ. ರವಾಂಡಾ ದೇಶದಲ್ಲಿ ಬಂಡವಾಳ ಹೂಡಲು ಜಿಲ್ಲೆಯ ಉದ್ಯಮಿಗಳು ಸಿದ್ಧರಿದ್ದಾರೆ ಎಂದು ತಿಳಿಸಿದರು.

ADVERTISEMENT

ವಿಮಾನ ನಿಲ್ದಾಣಕ್ಕಾಗಿ 800 ಎಕರೆ ಭೂಸ್ವಾಧೀನ ಪಡಿಸಿಕೊಂಡಿದ್ದರೂ ಅಭಿವೃದ್ಧಿ ಆಗಿಲ್ಲ. ಭೂಮಿ ವ್ಯರ್ಥವಾಗಿದೆ. ವಿಮಾನ ನಿಲ್ದಾಣ ಅಭಿವೃದ್ಧಿಯಾದರೆ ವಾಣಿಜ್ಯೋದ್ಯಮ ಅಭಿವೃದ್ಧಿ ಆಗುತ್ತದೆಎಂದು ಪ್ರತಿಪಾದಿಸಿದರು.

ಉಪಾಧ್ಯಕ್ಷ ಶ್ರೀನಿವಾಸ್‌,‘ವಿಮ್ಸ್‌ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಸರಿಪಡಿಸಬೇಕು. ಔಷಧಿ ಹೊರಗಿನಿಂದಲೇ ತರಬೇಕಾದ ಪರಿಸ್ಥಿತಿಯನ್ನು ಸರಿಪಡಿಸಬೇಕು’ ಎಂದು ಕೋರಿದರು.

ವಿಮ್ಸ್‌ಗೆ ಪೂರ್ಣಾವಧಿ ನಿರ್ದೇಶಕರನ್ನು ನೇಮಿಸಬೇಕು. ನಿರ್ದೇಶಕರು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರ ನಡುವೆ‌ ಸಮನ್ವಯತೆ ಕೊರತೆ ಇದ್ದು, ಇದು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ದೂರಿದರು.

300 ಎಕರೆಯ ಕೈಗಾರಿಕೆ‌ ಪ್ರದೇಶದಲ್ಲಿ ಮೂಲಸೌಕರ್ಯಗಳಿಲ್ಲ. ನೀರು, ರಸ್ತೆ ಇಲ್ಲ. ಪಾಲಿಕೆ ನಿರ್ಲಕ್ಷ್ಯ‌ ವಹಿಸಿದೆ ಎಂದು ‌ಆರೋಪಿಸಿದರು.

ಎಪಿಎಂಸಿ ಧಾನ್ಯ ವರ್ತಕರ ಸಂಘದ‌ ಮಹಾರುದ್ರಗೌಡ, ಸೆಸ್ ಅನ್ನು ಶೇ. 1ಕ್ಕೆ ಇಳಿಸಬೇಕು‌. ಮೆಣಸಿನಕಾಯಿ ಮಾರುಕಟ್ಟೆ ಆರಂಭವಾಗಿರುವುದರಿಂದ ಕನಿಷ್ಠ ಮೂರು ಶೀತಲ ಗೃಹಗಳನ್ನು ನಿರ್ಮಿಸಿಕೊಡಬೇಕು‌. 100 ಎಕರೆಯ ಎಪಿಎಂಸಿಗೆ ಕಾಂಪೌಂಡ್‌ ಇಲ್ಲ ಎಂದು ಗಮನ ಸೆಳೆದರು.

ಅಕ್ಕಿ ಗಿರಣಿ ಮಾಲೀಕರ ಸಂಘದ ಮುಖಂಡ‌ ಹೇಮಯ್ಯ ಸ್ವಾಮಿ, 2014–16ರ ಕೈಗಾರಿಕಾ ನೀತಿಯಲ್ಲಿ ಹೊಸ ಅಕ್ಕಿ ಗಿರಣಿಗಳಿಗೆ ಮಾರಾಟ ಶುಲ್ಕ‌ ರದ್ದುಪಡಿಸಲಾಗಿದೆ. ಹಳೇ ಗಿರಣಿಗಳಿಗೂ ಈ ವಿನಾಯಿತಿಯನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು‌.

ಶಾಸಕ ಕೆ.ಸಿ.ಕೊಂಡಯ್ಯ,ನಿರಂಜನ್ ನಾಯ್ಡು ಇದ್ದರು.

ವರದಿಗೆ ಸೂಚನೆ: ನಂತರ ಮಾತನಾಡಿದ ಸಚಿವರು,ಕೈಗಾರಿಕಾ ಪ್ರದೇಶದಲ್ಲಿ ಆಸ್ತಿ ತೆರಿಗೆ‌ ಮತ್ತು ಕೈಗಾರಿಕಾ ತೆರಿಗೆ‌ ಕಡಿಮೆ ಮಾಡುವ ನಿಟ್ಟಿನಲ್ಲಿ ಚುನಾವಣೆ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪಾಲಿಕೆಗೆ‌‌ ನಿರ್ದಿಷ್ಟ ಮೊತ್ತ ಪಾವತಿಸಿ ಉದ್ದಿಮೆದಾರರೇ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವ ಕಾಯ್ದೆಯನ್ನು ರೂಪಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.