ADVERTISEMENT

ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಸಂವಿಧಾನ ವಿರೋಧಿ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2025, 14:05 IST
Last Updated 15 ಮಾರ್ಚ್ 2025, 14:05 IST
<div class="paragraphs"><p>ರವಿಶಂಕರ ಪ್ರಸಾದ್‌</p></div>

ರವಿಶಂಕರ ಪ್ರಸಾದ್‌

   

ನವದೆಹಲಿ: ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡುವ ಕರ್ನಾಟಕ ಸರ್ಕಾರ ತೀರ್ಮಾನ ಸಂವಿಧಾನ ಬಾಹಿರ ಎಂದು ಬಿಜೆಪಿ ಟೀಕಿಸಿದೆ. 

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸಂಸದ ರವಿಶಂಕರ ಪ್ರಸಾದ್‌, ‘ಈ ನಡೆ ಕಾಂಗ್ರೆಸ್‌ನ ಓಲೈಕೆ ರಾಜಕಾರಣದ ಭಾಗ. ಇದು ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸುತ್ತದೆ. ಈ ನಿರ್ಧಾರದ ವಿರುದ್ಧ ಕೋರ್ಟ್‌ ಮೊರೆ ಹೋಗಲಾಗುತ್ತದೆ’ ಎಂದರು. 

ADVERTISEMENT

‘ಮುಸ್ಲಿ ಮತಗಳನ್ನು ಸೆಳೆಯಲು ವಿರೋಧ ಪಕ್ಷಗಳ ನಡುವಿನ ಸ್ಪರ್ಧಾತ್ಮಕ ಮತ ಬ್ಯಾಂಕ್‌ ರಾಜಕಾರಣದಲ್ಲಿ ಕಾಂಗ್ರೆಸ್‌ ಅನ್ನು ಮುನ್ನಡೆಸಲು ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ತೀರ್ಮಾನದ ಹಿಂದೆ ರಾಹುಲ್ ಗಾಂಧಿ ಇದ್ದಾರೆ. ರಾಹುಲ್ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಅವರು ಟೀಕಿಸಿದರು. 

ಕರ್ನಾಟಕ ಸರ್ಕಾರದ ಈ ಘೋಷಣೆಯು ಕೋಮು ಮತ್ತು ಮತ ಬ್ಯಾಂಕ್ ರಾಜಕೀಯಕ್ಕೆ ಹೊಸ ಆಯಾಮ ಕೊಟ್ಟಿದೆ. ಇಂತಹ ನಿರ್ಧಾರವು ಚಿಕ್ಕದಾಗಿ ಕಾಣಿಸಬಹುದು. ಆದರೆ, ಇಂತಹ ಬೆಳವಣಿಗೆಗಳು ಗಂಭೀರ ರಾಷ್ಟ್ರೀಯ ಪರಿಣಾಮಗಳನ್ನು ಬೀರುತ್ತವೆ’ ಎಂದು ಅವರು ಅಭಿಪ್ರಾಯಪಟ್ಟರು. 

ಸಂವಿಧಾನವನ್ನು ರಾಹುಲ್‌ ಗಾಂಧಿ ಅರ್ಥ ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ‘ಕರ್ನಾಟಕದ ಈ ಮಾದರಿಯಲ್ಲಿ ಕಾಂಗ್ರೆಸ್‌ ಆಡಳಿತವಿರುವ ಇತರ ರಾಜ್ಯಗಳು ಅನುಸರಿಸಬಹುದು’ ಎಂದರು. 

ತಕರಾರು ಇದ್ದರೆ ಕಾನೂನು ಮೊರೆ ಹೋಗಿ

ಮೈಸೂರು: ‘ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರದ ಕುರಿತು ಬಿಜೆಪಿಯವರಿಗೆ ತಕರಾರು ಇದ್ದರೆ ಕಾನೂನಿನ ಮೊರೆ ಹೋಗಲು ಅವಕಾಶವಿದೆ’ ಎಂದು ಎಐಸಿಸಿ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು ಸರ್ಕಾರಗಳ ಅಧಿಕಾರ. ಹಿಂದುಳಿದ ವರ್ಗಗಳಿಗೆ
ಸಂವಿಧಾನಬದ್ಧವಾಗಿ ಬೆಂಬಲ ನೀಡುವುದು ತಪ್ಪಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.