ADVERTISEMENT

ಮೀಸಲಾತಿ: ನ್ಯಾಯಸಮ್ಮತ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟ ಸಭೆ ನಿರ್ಧಾರ

ಎಲ್ಲಾ ಸಚಿವರಿಂದ ಅಭಿಪ್ರಾಯ ಸಂಗ್ರಹ; ಮುಂದಿನ ಸಂಪುಟ ಸಭೆಯಲ್ಲಿ ಮತ್ತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 22:06 IST
Last Updated 18 ಫೆಬ್ರುವರಿ 2021, 22:06 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಮೀಸಲಾತಿ ಸ್ಥಿತಿಗತಿ ಕುರಿತು ವಿವಿಧ ಸಮುದಾಯಗಳು ಸಲ್ಲಿಸಿರುವ ಮನವಿ ಮತ್ತು ಬೇಡಿಕೆಗಳ ಬಗ್ಗೆ ಸುಪ್ರೀಂಕೋರ್ಟ್‌ ತೀರ್ಪುಗಳು ಹಾಗೂ ಸಂವಿಧಾನದ ಚೌಕಟ್ಟಿನಲ್ಲಿ ನ್ಯಾಯಸಮ್ಮತ ತೀರ್ಮಾನ ತೆಗೆದುಕೊಳ್ಳಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಮೀಸಲಾತಿ ಕುರಿತು ವಿವಿಧ ಸಮುದಾಯಗಳು ನಡೆಸುತ್ತಿರುವ ಹೋರಾಟಗಳು ಮತ್ತು ಬೇಡಿಕೆಗಳ, ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಎಲ್ಲ ಸಚಿವರಿಂದ ಅಭಿಪ್ರಾಯಗಳನ್ನು ಪಡೆದು ವಿಸ್ತೃತ ಚರ್ಚೆ ನಡೆಸಿದರು ಎಂದು ಸಂಪುಟ ಸಭೆ ಬಳಿಕ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.

ಸಭೆಯಲ್ಲಿ ಎಲ್ಲ ಸಚಿವರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿದರು. ಕೆಲವು ದೊಡ್ಡ ಸಮುದಾಯಗಳು ಹೋರಾಟದ ಮೂಲಕ ಮನವಿ ಸಲ್ಲಿಸಿದ್ದರೆ, ಇನ್ನು ಕೆಲವು ಸಣ್ಣ ಪುಟ್ಟ ಮತ್ತು ಪ್ರಬಲವಲ್ಲದ ಸಮುದಾಯಗಳು ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿವೆ. ಇವೆಲ್ಲವನ್ನೂ ಪರಿಗಣಿಸಬೇಕು. ಯಾರಿಗೂ ಅನ್ಯಾಯವಾಗಬಾರದು. ಸಂಪೂರ್ಣ ವಿವರಗಳನ್ನು ಪಡೆದು ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯವನ್ನು ಕೈಗೆತ್ತಿಕೊಳ್ಳಲು ಮುಖ್ಯಮಂತ್ರಿ ಸೂಚಿಸಿದರು ಎಂದು ಬೊಮ್ಮಾಯಿ ಹೇಳಿದರು.

ADVERTISEMENT

ಸಂಪುಟ ಸಭೆ ಮುಗಿದ ಬಳಿಕ ಅಧಿಕಾರಿಗಳನ್ನು ಹೊರಗೆ ಕಳುಹಿಸಿ, ಅನೌಪಚಾರಿಕವಾಗಿ ಮೀಸಲಾತಿ ವಿಷಯವನ್ನು ಚರ್ಚಿಸಲಾಯಿತು. ಆಗ ಹಲವು ಸಚಿವರು ತಮ್ಮ ಸಮುದಾಯದ ಬೇಡಿಕೆಗಳನ್ನು ಮುಂದಿಟ್ಟು, ಈಡೇರಿಸುವ ಅನಿವಾರ್ಯವನ್ನು ಪ್ರತಿಪಾದಿಸಿದರು. ಮುಖ್ಯಮಂತ್ರಿಯವರು ಎಲ್ಲ ಮಾತುಗಳನ್ನೂ ಆಲಿಸಿದರು ಎಂದು ಮೂಲಗಳು ಹೇಳಿವೆ.

ಕುರುಬರು, ಲಿಂಗಾಯತ ಪಂಚಮಸಾಲಿ, ವಾಲ್ಮೀಕಿ, ಆದಿ ಜಾಂಬವ, ನೇಕಾರ, ಉಪ್ಪಾರ, ಮಡಿವಾಳ ಸಮುದಾಯಗಳು ಈಗಾಗಲೇ ಹೋರಾಟ ಆರಂಭಿಸಿದ್ದರೆ, ಒಕ್ಕಲಿಗರು ಸೇರಿ ಇನ್ನೂ ಹಲವು ಸಮುದಾಯಗಳ ಸ್ವಾಮೀಜಿಗಳೂ ತಮ್ಮ ಸಮುದಾಯಗಳ ಪರವಾಗಿ ಮೀಸಲಾತಿಯಲ್ಲಿ ಪಾಲಿಗಾಗಿ ಪಟ್ಟು ಹಿಡಿದಿದ್ದಾರೆ. ಕುರುಬ ಸಮಾಜ ಈಗಾಗಲೇ ದೊಡ್ಡ ಮಟ್ಟದ ಸಮಾವೇಶ ನಡೆಸಿದ್ದು, ಪಂಚಮಸಾಲಿ ಸಮುದಾಯ ಕೂಡ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಇವೆಲ್ಲದರ ಸೂಕ್ಷ್ಮತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ಭರವಸೆ
ಬೆಂಗಳೂರು: ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಸಂಬಂಧ ಆ ಸಮುದಾಯಕ್ಕೆ ಸೇರಿದ ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಗುರುವಾರ ಭೇಟಿ ಮಾತುಕತೆ ನಡೆಸಿದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ರಾಜುಗೌಡ, ‘ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಕುರಿತಂತೆ ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಯವರು ಆಲಿಸಿದ್ದಾರೆ. ಕಾನೂನು ತಜ್ಞರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

‘ನಮ್ಮ ಸಮುದಾಯದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಅದಕ್ಕೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಲುಕೋರಿದೆವು’ ಎಂದು ಹೇಳಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಮೀಸಲಾತಿ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಹೋರಾಟ ಆರಂಭಿಸಿದೆವು. ಪರಿಶಿಷ್ಟಜಾತಿ– ಪಂಗಡಗಳಿಗೆ ಒಟ್ಟು ಶೇ 50 ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಲಾಗಿತ್ತು’ ಎಂದರು.‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲರಿಗೂ ನ್ಯಾಯ ಒದಗಿಸುತ್ತಾರೆ ಎಂಬ ಕಾರಣಕ್ಕೆ ಈಗ ಇತರ ಸಮುದಾಯದವರೂ ಹೋರಾಟಕ್ಕೆ ಇಳಿದಿದ್ದಾರೆ. ಅದಕ್ಕೆ ನಮ್ಮ ಆಕ್ಷೇಪ ಇಲ್ಲ’ ಎಂದು ಅವರು ಹೇಳಿದರು.

ಇಂದಿನ ಸಭೆಯಲ್ಲಿ ಸಚಿವರಾದ ಬಿ.ಶ್ರೀರಾಮುಲು, ರಮೇಶ ಜಾರಕಿಹೊಳಿ, ಶಾಸಕರಾದ ಶಿವನಗೌಡ ನಾಯಕ್, ರಾಮಚಂದ್ರ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮುಂತಾದವರು ಸಭೆಯಲ್ಲಿದ್ದರು.

‘ವರದಿ ಬಿಡುಗಡೆಗೆ ಆಗ್ರಹ’
ಮಡಿಕೇರಿ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಾಜ್ಯದಲ್ಲಿ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಸ್ವೀಕರಿಸಿ, ಬಿಡುಗಡೆ ಮಾಡಬೇಕು ಎಂದು ‘ಅಹಿಂದ’ ಒಕ್ಕೂಟದ ಸ್ಥಳೀಯ ಘಟಕ ಆಗ್ರಹಪಡಿಸಿದೆ.

ಗುರುವಾರ ‍ನಗರದಲ್ಲಿ ಈ ಬಗ್ಗೆ ಪ್ರತಿಭಟನೆ ನಡೆಯಿತು. ‘ವರದಿ ಅನುಷ್ಠಾನಗೊಂಡರೆ, ಮೀಸಲಾತಿ ದೊರಕದಿರುವ ಸಣ್ಣ ಜಾತಿಗಳಿಗೆ ವೈಜ್ಞಾನಿಕವಾಗಿ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ರಾಜ್ಯದಲ್ಲಿರುವ ಜಾತಿಗಳ ಅಂಕಿ–ಅಂಶಗಳು ಅಧಿಕೃತವಾಗಿ ದೊರೆಯಲು ಸಾಧ್ಯವಾಗಲಿದೆ’ ಎಂದು ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.