ಸಿದ್ದರಾಮಯ್ಯ
ಬೆಂಗಳೂರು: ಪ್ರಧಾನಮಂತ್ರಿ ಅವರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 15-ಅಂಶಗಳ ಕಾರ್ಯಕ್ರಮದ (2019) ಮಾರ್ಗಸೂಚಿಯಂತೆಯೇ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ 15 ಮೀಸಲು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯದ ಅನುಷ್ಠಾನ ಸಂಸ್ಥೆಗಳು ಅಲ್ಪಸಂಖ್ಯಾತರಿಗೆ ಶೇ 15ರಷ್ಟು ಭೌತಿಕ ಮತ್ತು ಆರ್ಥಿಕ ಗುರಿಗಳನ್ನು ಮೀಸಲಿಡುವಂತೆ ಕೇಂದ್ರ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಕೇಂದ್ರದ ಮಾರ್ಗಸೂಚಿಗಳಿಗೆ ಅನುಗುಣವಾಗಿಯೇ ಕ್ರೈಸ್ತರು, ಜೈನರು, ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಮೀಸಲು ನೀಡಲು ಸಚಿವ ಸಂಪುಟ ಅನುಮೋದಿಸಿದೆ. ಈ ಮಾರ್ಗಸೂಚಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಹೊರಡಿಸಿದೆ. ಹಲವು ವರ್ಷಗಳಿಂದ ಈ ನೀತಿ ಜಾರಿಯಲ್ಲಿದೆ. ಪ್ರಧಾನಮಂತ್ರಿ ಆವಾಸ್‌ನಂತಹ ಕೇಂದ್ರ ಯೋಜನೆಗಳಲ್ಲೇ ಶೇ 15ರಷ್ಟು ಮೀಸಲು ನಿಗದಿ ಮಾಡಲಾಗಿದೆ ಎಂದಿದ್ದಾರೆ.
ಅಲ್ಪಸಂಖ್ಯಾತರಿಗೆ ಶೇ 15ರಷ್ಟು ಮೀಸಲಿಡುವುದು ಅಸಾಂವಿಧಾನಿಕ ಎನ್ನುವುದಾದರೆ ಕೇಂದ್ರ ಸರ್ಕಾರ ಏಕೆ ಪಾಲನೆ ಮಾಡುತ್ತಿದೆ? ಎಲ್ಲಾ ರಾಜ್ಯಗಳಿಗೆ ಏಕೆ ಮಾರ್ಗಸೂಚಿ ಕಳುಹಿಸಿದೆ ಎಂದು ಪ್ರಶ್ನಿಸಿದ್ದಾರೆ.
ಕೋಟಾದ ಸಂಪೂರ್ಣ ಹೆಚ್ಚಳಕ್ಕೆ ಸಚಿವ ಸಂಪುಟ ಅವಕಾಶ ನೀಡಿಲ್ಲ. ಅಲ್ಪಸಂಖ್ಯಾತರ ಜನಸಂಖ್ಯೆ ಶೇ 10ಕ್ಕಿಂತ ಕಡಿಮೆ ಇರುವ ಪಂಚಾಯಿತಿಗಳಲ್ಲಿ ಈಗಿರುವ ಶೇ 10ರಷ್ಟು ಗುರಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಹೆಚ್ಚಿನ ಜನಸಂಖ್ಯೆ ಇರುವ ಪಂಚಾಯಿತಿಗಳಲ್ಲಿ ಮರುಹಂಚಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಇದು ಪರಿಶಿಷ್ಟರು ಅಥವಾ ಹಿಂದುಳಿದ ವರ್ಗಗಳ ಮೀಸಲಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ನಿರ್ಧಾರ ಕಾನೂನುಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ಪ್ರತಿಕ್ರಿಯೆ ಬೂಟಾಟಿಕೆ ಮತ್ತು ರಾಜಕೀಯ ಪ್ರೇರಿತವಾಗಿದೆ. ರಾಷ್ಟ್ರಮಟ್ಟದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ 15 ಮೀಸಲಿಟ್ಟಿರುವ ಅದೇ ಪಕ್ಷ ರಾಜ್ಯ ಯೋಜನೆಗಳಿಗೆ ಅದೇ ತತ್ವವನ್ನು ಅನ್ವಯಿಸಿದ್ದಕ್ಕಾಗಿ ತುಷ್ಟೀಕರಣದ ಆರೋಪ ಮಾಡುತ್ತಿದೆ. ಇದು ಕೋಮು ಭಾವನೆಗಳನ್ನು ಕೆರಳಿಸುವ ಮತ್ತು ರಾಜ್ಯದ ಬಡ ಕುಟುಂಬಗಳನ್ನು ಮೇಲಕ್ಕೆತ್ತಲು ಮಾಡುತ್ತಿರುವ ಪ್ರಯತ್ನಗಳನ್ನು ಹಳಿತಪ್ಪಿಸುವ ಬಿಜೆಪಿ ನಡೆ. ಇಂತಹ ಕಿರಿದಾದ ರಾಜಕೀಯ ಲೆಕ್ಕಾಚಾರಗಳನ್ನು ಮೀರಿ ಬಡವರನ್ನು ಮೇಲಕ್ಕೆತ್ತುವ ಕ್ರಮಗಳನ್ನು ಬಿಜೆಪಿ ನಾಯಕರು ಬೆಂಬಲಿಸಲಿ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.