ADVERTISEMENT

ವಸತಿ ಶಾಲೆ ಸಂಖ್ಯೆ 10ಕ್ಕೆ ಏರಿಕೆ: ಕೋಟ ಶ್ರೀನಿವಾಸ ಪೂಜಾರಿ

ನಾರಾಯಣ ಗುರು ಜಯಂತಿ: ಸಚಿವ ಶ್ರೀನಿವಾಸ ಪೂಜಾರಿ ಭರವಸೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 18:30 IST
Last Updated 10 ಸೆಪ್ಟೆಂಬರ್ 2022, 18:30 IST
ಕಾರ್ಯಕ್ರಮದಲ್ಲಿ ಸಚಿವ ವಿ.ಸುನಿಲ್‌ ಕುಮಾರ್ ಅವರು ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಶಾಸಕ ವೈ.ಭರತ್‌ ಶೆಟ್ಟಿ ಇದ್ದಾರೆ
ಕಾರ್ಯಕ್ರಮದಲ್ಲಿ ಸಚಿವ ವಿ.ಸುನಿಲ್‌ ಕುಮಾರ್ ಅವರು ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಶಾಸಕ ವೈ.ಭರತ್‌ ಶೆಟ್ಟಿ ಇದ್ದಾರೆ   

ಮಂಗಳೂರು: ‘ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡುವ ಬ್ರಹ್ಮಶ್ರೀ ನಾರಾಯಣಗುರು ವಸತಿ ಶಾಲೆಗಳನ್ನು ಸರ್ಕಾರ ನಾಲ್ಕು ಕಡೆ ಆರಂಭಿಸಿದೆ. ಈ ಶಾಲೆಗಳ ಸಂಖ್ಯೆಯನ್ನು 10ಕ್ಕೆ ಹೆಚ್ಚಿಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಾರಾಯಣ ಗುರು ಜಯಂತಿ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ವಸತಿ ಶಾಲೆಗಳಿಗೆ ತಲಾ ₹ 30 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಇದರ ಮುಂದುವರಿದ ಭಾಗವಾಗಿ ಮತ್ತೆ 6 ಶಾಲೆಗಳನ್ನು ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ’ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌, ‘ಧರ್ಮವು ವಾದದ ವಸ್ತುವಲ್ಲ; ಜಯದ ವಸ್ತುವೂ ಅಲ್ಲ. ಯಾವುದೇ ಧರ್ಮವು ಇನ್ನೊಂದು ಧರ್ಮವನ್ನು ಹೀಯಾಳಿಸುವುದಿಲ್ಲ ಎಂಬ ಸಂದೇಶ ಸಾರಿದವರು ನಾರಾಯಣಗುರುಗಳು. ಅವರ ಚಿಂತನೆಗಳು ಒಂದು ಜಾತಿಗೆ ಸೀಮಿತವಾಗಿಲ್ಲ. ಮಹಾಪುರುಷರನ್ನು ಪೂಜೆಗೆ ಸೀಮಿತಗೊಳಿಸದೇ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ಗೌರವ’ ಎಂದರು.

ADVERTISEMENT

‘ಇಲಾಖೆಯು 50ಕ್ಕೂ ಹೆಚ್ಚು ದಾರ್ಶನಿಕರ ಜಯಂತಿಗಳನ್ನು ಬೆಂಗಳೂರಿನಲ್ಲೇ ಆಚರಿಸುತ್ತಿತ್ತು. ಇಂತಹ ಜಯಂತಿ ಜನರ ನಡುವೆ ಆಚರಣೆಯಾಗಬೇಕು ಎಂಬ ಉದ್ದೇಶದಿಂದ ಬೇರೆ ಬೇರೆ ಜಿಲ್ಲೆಗಳಲ್ಲಿ ಆಚರಿಸಲು ಕ್ರಮವಹಿಸಲಾಗಿದೆ’ ಎಂದು ಹೇಳಿದರು.

ಸಂಸದ ನಳಿನ್ ಕುಮಾರ್‌ ಕಟೀಲ್‌, ‘ಕೇರಳದಲ್ಲಿಸನಾತನಹಿಂದೂ ಸಮಾಜ, ಸಂಸ್ಕೃತಿ, ಪರಂಪರೆ ಈಗಲೂಉಳಿದಿದ್ದರೆ,ಅದಕ್ಕೆ ನಾರಾಯಣ ಗುರುಗಳುಕಾರಣ.ಮೂಢನಂಬಿಕೆಹಾಗೂ ಅಸ್ಪೃಶ್ಯತೆ ವಿರುದ್ಧ ಹೋರಾಡುವ ಮೂಲಕ ಅವರು ಆಧ್ಯಾತ್ಮಿಕ ಕ್ರಾಂತಿಯನ್ನೇ ಮಾಡಿದರು’ ಎಂದರು.

ಶಾಸಕ ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಅದ್ಧೂರಿ ಶೋಭಾಯಾತ್ರೆ ನಡೆಯಿತು.

ಪಂಚಮಸಾಲಿಗಳಿಗೆ, ಕುರುಬರಿಗೆ ಮೀಸಲಾತಿ ಅಗತ್ಯ ಇದೆಯೇ’?

ಶಿವಮೊಗ್ಗ: ‘ಮೀಸಲಾತಿ ಇಂದು ದುರುಪಯೋಗವಾಗುತ್ತಿದೆ. ಪಂಚಮಸಾಲಿ ಸಮಾಜದವರು 2ಎ ಮೀಸಲಾತಿ ಬೇಕು ಎಂದು, ಕುರುಬರು ಎಸ್.ಟಿಗೆ ಸೇರಿಸಬೇಕು ಎಂದು, ಕೆಲವರು ಒಳಮೀಸಲಾತಿ ಬೇಕೆಂದು ಕೇಳುತ್ತಲೇ ಇದ್ದಾರೆ. ನಿಜವಾಗಿಯೂ ಪಂಚಮಸಾಲಿ ಸಮಾಜದವರಿಗೆ, ಕುರುಬರಿಗೆ ಮೀಸಲಾತಿ ಅಗತ್ಯ ಇದೆಯೇ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ಇಲ್ಲಿನ ಜಿಲ್ಲಾಡಳಿತ ಶನಿವಾರ ಹಮ್ಮಿಕೊಂಡಿದ್ದ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮೀಸಲಾತಿ ಎಂಬುದು ಇಂದು ರಾಜಕೀಯ ಅಸ್ತ್ರವಾಗಿದೆ. ಮೀಸಲಾತಿ ಸಿಗುವುದಿಲ್ಲ ಎಂದು ಗೊತ್ತಿದ್ದರೂ ಕೆಲವು ಸಮುದಾಯದವರು ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮತ ಬ್ಯಾಂಕ್ ಗಮನದಲ್ಲಿಟ್ಟುಕೊಂಡು ಈಗ ಮೀಸಲಾತಿಯ ಪ್ರಶ್ನೆ ಏಳುತ್ತಿದೆ. ನನಗೂ ಬೇಕು, ನನ್ನ ಜಾತಿಗೂ ಬೇಕು ಎಂದು ಮೀಸಲಾತಿ ಕೇಳುವವರು ಹೆಚ್ಚುತ್ತಲೇ ಇದ್ದಾರೆ. ಯಾರಿಗೆ? ಎಷ್ಟು? ಯಾವಾಗ? ಮೀಸಲಾತಿ ಕೊಡಬೇಕು ಎಂಬುದೇ ಇಂದಿನ ಸಮಸ್ಯೆಯಾಗಿದೆ. ಡಾ.ಅಂಬೇಡ್ಕರ್ ಅವರು 10 ವರ್ಷದವರೆಗೆ ಮೀಸಲಾತಿ ಕೊಡಬೇಕು ಎಂದಿದ್ದರು. ಆದರೆ, 75 ವರ್ಷಗಳಾದರೂ ಮೀಸಲಾತಿಗಾಗಿ ಎಲ್ಲಾ ಸಮಾಜದವರು ಪಟ್ಟು ಹಿಡಿಯುತ್ತಿದ್ದಾರೆ. ಇದನ್ನು ನೋಡಿದರೆ ಆಶ್ಚರ್ಯವಾಗುತ್ತದೆ’ ಎಂದರು.

‘ಮೀಸಲಾತಿ ಸಿಗಬೇಕಾಗಿರುವುದು ಬಡವರಿಗೆ, ದೀನ ದಲಿತರಿಗೆ, ತುಳಿತಕ್ಕೆ ಒಳಗಾದವರಿಗೆ. ಹೀಗಾಗಿ ಮೀಸಲಾತಿ ಜಾತಿ ಸೂಚಕವಾಗಬಾರದು’ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.