ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಹೆಚ್ಚಿನ ಸಂಪನ್ಮೂಲ ಒದಗಿಸಿ, ಸಾರ್ವಜನಿಕ ಗ್ರಂಥಾಲಯಗಳನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದು ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ 133ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಲಾಗಿದ್ದ ಗ್ರಂಥಪಾಲಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ದುಬಾರಿ ಕೋಚಿಂಗ್ ಕೇಂದ್ರಗಳಿಗೆ ಹೋಗಲು ಸಾಧ್ಯವಿಲ್ಲದ ವಿದ್ಯಾರ್ಥಿಗಳು ದಿನವಿಡೀ ಗ್ರಂಥಾಲಯಗಳಲ್ಲಿ ಓದುತ್ತಾರೆ. ಹೀಗಾಗಿ ಅವರಿಗೆ ಎಲ್ಲ ರೀತಿಯ ಸಂಪನ್ಮೂಲ ಒದಗಿಸಬೇಕಾಗುತ್ತದೆ ಎಂದರು.
‘ಸಾರ್ವಜನಿಕ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಹೆಚ್ಚಿಸಲು, ಬೇಕಾದ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದರ ಬಗ್ಗೆ ಪ್ರತಿಯೊಬ್ಬ ಗ್ರಂಥಪಾಲಕರೂ ಒತ್ತು ನೀಡಬೇಕು. ಗ್ರಂಥಾಲಯ ಬಲಪಡಿಸುವಲ್ಲಿ ಸವಾಲುಗಳಿದ್ದರೂ ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತದೆ’ ಎಂದು ತಿಳಿಸಿದರು.
‘ಸರ್ಕಾರಿ ಪಿಯುಸಿ ವಿದ್ಯಾರ್ಥಿಗಳಿಗೆ ಜೆಇಇ ಹಾಗೂ ನೀಟ್‌ಗೆ ಉಚಿತ ತರಬೇತಿಯನ್ನು ಆರಂಭಿಸಲಾಗಿದೆ. ಪ್ರಸ್ತುತ 25 ಸಾವಿರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದು, ಇಂತಹ ಸೌಲಭ್ಯ ಒದಗಿಸುವ ಏಕೈಕ ರಾಜ್ಯವಾಗಿದೆ. ಈ ತರಬೇತಿಯಿಂದ ಗೌರಿಬಿದನೂರಿನ ಎನ್. ಸಂಕೇತ್ ರಾಜ್ ಐಐಟಿ ಖರಗಪುರ್‌ಗೆ ಪ್ರವೇಶ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಮೂರು ಪರೀಕ್ಷಾ ಪದ್ಧತಿ ಹಾಗೂ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಗೆ ವೆಬ್‌ಕಾಸ್ಟಿಂಗ್ ಸೇರಿದಂತೆ ಶಿಕ್ಷಣ ಇಲಾಖೆಯಲ್ಲಿ ಇನ್ನೂ ಹಲವು ನೂತನ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಮಧು ಬಂಗಾರಪ್ಪ ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಕರಿಗೌಡ ಬೀಚನಹಳ್ಳಿ, ಎನ್ಎಎಲ್ ಗ್ರಂಥಾಲಯ ಮುಖ್ಯಸ್ಥ ಬಿ. ಎಸ್. ಶಿವರಾಮ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಎಚ್. ಬಸವರಾಜೇಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.