ADVERTISEMENT

ರಾಜ್ಯದಲ್ಲಿ 5,024 ಹೊಸ ಪೆಟ್ರೋಲ್‌ ಬಂಕ್‌

ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಕೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 20:25 IST
Last Updated 25 ನವೆಂಬರ್ 2018, 20:25 IST
ಪೆಟ್ರೋಲ್‌ ಬಂಕ್‌
ಪೆಟ್ರೋಲ್‌ ಬಂಕ್‌   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ರಾಜ್ಯದಲ್ಲಿ 5,024 ಹೊಸ ಪೆಟ್ರೋಲ್‌ ಬಂಕ್‌ಗಳನ್ನು ತೆರೆಯಲು ಮುಂದಾಗಿವೆ.

ಇವುಗಳಲ್ಲಿ ಗ್ರಾಮೀಣ ಭಾಗದಲ್ಲಿಯೇ 1,109 ಬಂಕ್‌ಗಳು ಇರಲಿವೆ ಎಂದು ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ನ (ಐಒಸಿ) ಕರ್ನಾಟಕದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಎಲ್‌.ಪ್ರಮೋದ್‌ ಅವರು ಭಾನುವಾರ ಇಲ್ಲಿ ಮಾಹಿತಿ ನೀಡಿದರು.

‘ಬಂಕ್‌ಗಳ ಹೆಚ್ಚಳದಿಂದ ಗಣನೀಯವಾಗಿ ಹೊಸ ಉದ್ಯೋಗ ಸೃಷ್ಟಿಯೂ ಆಗಲಿದೆ. ಒಂದು ಬಂಕ್‌ನಲ್ಲಿ 5 ರಿಂದ 10 ಮಂದಿಗೆ ಉದ್ಯೋಗ ಸಿಗಲಿದೆ’ ಎಂದರು.

ADVERTISEMENT

ಇಂಡಿಯನ್‌ ಆಯಿಲ್‌, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ ಕಂಪನಿಗಳು ಆನ್‌ಲೈನ್‌ ಮೂಲಕ ಅರ್ಹ ವಿತರಕರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿವೆ.

‘ಹೊಸ ಬಂಕ್‌ಗಳು ಸಂಪೂರ್ಣವಾಗಿ ಆಧುನಿಕ ತಂತ್ರಜ್ಞಾನದಿಂದ ಕೂಡಿರಲಿವೆ. ಸ್ವಯಂಚಾಲಿತ ವ್ಯವಸ್ಥೆ ಜಾರಿಗೊಳಿಸಲಾಗುವುದು. ಒಂದೊಮ್ಮೆ ಪೆಟ್ರೋಲ್‌ ದರ ಲೀಟರಿಗೆ ₹ 100ಕ್ಕೆ ತಲುಪಿದರೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ’ ಎಂದರು.

ಆನ್‌ಲೈನ್‌ ಅರ್ಜಿ: ‘ಹೊಸ ಬಂಕ್‌ಗೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಮತ್ತು ಮಾಹಿತಿಗೆ www.petrolpumpdealerchayan.in ಜಾಲತಾಣಕ್ಕೆ ಭೇಟಿ ನೀಡಬಹುದು’ ಎಂದು ತಿಳಿಸಿದರು.

‘ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲೆಗಳನ್ನೂ ಸಲ್ಲಿಸುವ ಅಗತ್ಯ ಇಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಂದ ಮಾತ್ರವೇ ಅಗತ್ಯ ದಾಖಲೆಗಳನ್ನು ಪಡೆಯಲಾಗುವುದು. ವಯಸ್ಸಿನ ಮಿತಿಯನ್ನು 55 ರಿಂದ 64ಕ್ಕೆ ಹೆಚ್ಚಿಸಲಾಗಿದೆ.

‘ಬಂಕ್‌ ನಿರ್ಮಾಣಕ್ಕೆ ಭೂಮಿ ಇಲ್ಲದೇ ಇದ್ದರೂ ಅರ್ಜಿ ಸಲ್ಲಿಸಬಹುದು. ಒಂದೊಮ್ಮೆ ಇಂಥವರು ಆಯ್ಕೆ ಆದರೆ, ಆಗ ಭೂಮಿ ಹೊಂದಿಸಲು ಅವರಿಗೆ ಕಾಲಮಿತಿ ನೀಡಲಾಗುವುದು. ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿರಿಸಲು ಸರ್ಕಾರಿ ಸ್ವಾಮ್ಯದ ಎನ್‌ಐಸಿ ಮತ್ತು ಎಂಎಸ್‌ಟಿಸಿ ಸಂಸ್ಥೆಗಳ ಮೂಲಕ ಬಿಡ್ ನಡೆಸಲಾಗುವುದು’ ಎಂದು ಹೇಳಿದರು.

ಹೆಚ್ಚುತ್ತಿದೆ ಬೇಡಿಕೆ:ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಚಿಲ್ಲರೆ ಮಾರಾಟ ಹೆಚ್ಚಾಗುತ್ತಿದೆ. ಪೆಟ್ರೋಲ್‌ ಮಾರಾಟ ಶೇ 7ರಷ್ಟು ಮತ್ತು ಡೀಸೆಲ್‌ ಮಾರಾಟ ಶೇ 9ರಷ್ಟು ಏರಿಕೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.