ADVERTISEMENT

ಪರೀಕ್ಷೆಗೆ ನಿವೃತ್ತ ಅಧಿಕಾರಿ ಹಾಜರ್: ಇತಿಹಾಸದಲ್ಲೇ ಅಪರೂಪದ ಪ್ರಕರಣ

ಬಡ್ತಿ, ಸೇವಾ ಜ್ಯೇಷ್ಠತೆಗೆ ಹೋರಾಟ

ರಾಜೇಶ್ ರೈ ಚಟ್ಲ
Published 31 ಆಗಸ್ಟ್ 2020, 2:52 IST
Last Updated 31 ಆಗಸ್ಟ್ 2020, 2:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
""

ಬೆಂಗಳೂರು: ಹುದ್ದೆಯಿಂದ ನಿವೃತ್ತಿಯಾದ ಹಿರಿಯ ಅಧಿಕಾರಿಯೊಬ್ಬರು ಇದೀಗ ಸೇವಾ ಜ್ಯೇಷ್ಠತೆ ಹಾಗೂ ಬಡ್ತಿಗಾಗಿ ‘ಇಲಾಖಾ ಪರೀಕ್ಷೆ’ ಬರೆಯುತ್ತಿದ್ದಾರೆ!

ಅವರಂತೆ, ನಿವೃತ್ತಿ ಅಂಚಿನಲ್ಲಿರುವ ಇನ್ನೂ ಕೆಲವು ಅಧಿಕಾರಿಗಳು ಕೂಡಾ ಈ ಪರೀಕ್ಷೆ ಬರೆಯುತ್ತಿದ್ದಾರೆ. ಅವರೆಲ್ಲರೂ ಹೈಕೋರ್ಟ್‌ ತೀರ್ಪಿನ ಅನ್ವಯ, ಉನ್ನತ ಹುದ್ದೆಯಿಂದ 13 ವರ್ಷಗಳ ಬಳಿಕ ಬೇರೊಂದು ಇಲಾಖೆಗೆ ಬದಲಾಗಿ ಸದ್ಯ ಪರೀಕ್ಷಾರ್ಥಿಗಳಾಗಿ (ಪ್ರೊಬೇಷನರಿ) ನಾನಾ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

‘ರಾಜ್ಯ ಸರ್ಕಾರದ ಇತಿಹಾಸದಲ್ಲೇ ಇದೊಂದು ವಿಚಿತ್ರ ಪ್ರಕರಣ. ಇಂಥ ಸಂದರ್ಭ ಬಂದಿರುವುದು ಇದೇ ಮೊದಲು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಹುದ್ದೆಯಿಂದ ಮೇ 31ರಂದು ನಿವೃತ್ತಿ ಹೊಂದಿರುವ ರಾಮಪ್ಪ ಹಟ್ಟಿ ಪರೀಕ್ಷೆ ಬರೆಯುತ್ತಿರುವವರು. ಆ. 28ರಂದು ಪರೀಕ್ಷೆ ಬರೆದಿರುವ ಅವರು, ಆ. 31 ಮತ್ತು ಸೆ. 2ರಂದು ನಡೆಯಲಿರುವ ಪರೀಕ್ಷೆಗೂ ಸಿದ್ಧತೆ ನಡೆಸಿದ್ದಾರೆ. 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ 2016ರಲ್ಲಿ ನೀಡಿದ್ದ ತೀರ್ಪು ಜಾರಿಯಾಗುತ್ತಿದ್ದರೆ ಹಟ್ಟಿ ಅವರು ಐಎಎಸ್‌ಗೆ ಬಡ್ತಿ ಪಡೆದು ನಿವೃತ್ತಿಯಾಗಬೇಕಿತ್ತು. ಆದರೆ, ಸರ್ಕಾರ ತೆಗೆದುಕೊಂಡ ನಿಲುವಿನಿಂದಾಗಿ, ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿ ಜಂಟಿ ನಿಯಂತ್ರಕರಾಗಿದ್ದ ಅವರು ಸ್ಥಾನಪಲ್ಲಟಗೊಂಡು ಉಪ ವಿಭಾಗಾಧಿಕಾರಿ (ಕಿರಿಯ ಶ್ರೇಣಿ) ಹುದ್ದೆಯಲ್ಲಿ ಪ್ರೊಬೇಷನರಿ ಅವಧಿಯಲ್ಲಿದ್ದಾಗಲೇ ನಿವೃತ್ತಿಯಾಗಿದ್ದಾರೆ. ಅವರೂ ಸೇರಿ 75 ಅಧಿಕಾರಿಗಳು ಹುದ್ದೆ ಬದಲಿಸಿಕೊಂಡಿದ್ದು, ಯಾರಿಗೂ ಸರ್ಕಾರ ಸೇವಾ ಜ್ಯೇಷ್ಠತೆ, ಬಡ್ತಿ ನೀಡಿಲ್ಲ.

‘ಕೆಪಿಎಸ್‌ಸಿ ಮಾಡಿದ ತಪ್ಪಿನಿಂದ, ಉಪ ವಿಭಾಗಾಧಿಕಾರಿ ಹುದ್ದೆ ವಂಚಿತ ನಾಗಿ ರಾಜ್ಯ ಲೆಕ್ಕಪತ್ರ ಇಲಾಖೆಗೆ ಸಹಾಯಕ ಲೆಕ್ಕ ನಿಯಂತ್ರಕನಾಗಿ 2006 ರಲ್ಲಿ ಸೇರಿದ್ದೆ. 21 ವರ್ಷ ವಾಯು ಸೇನೆಯಲ್ಲಿ ಕೆಲಸ ಮಾಡಿದ್ದರಿಂದ ಸೇನಾ ಕೋಟಾದಲ್ಲಿ ಆಯ್ಕೆಯಾಗಿದ್ದೆ. ಹೈಕೋರ್ಟ್‌ ತೀರ್ಪಿನಂತೆ ಕೆಪಿಎಸ್‌ಸಿ ಪರಿಷ್ಕರಿಸಿದ್ದ ಮೂರೂ ಪಟ್ಟಿಯಲ್ಲಿ ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದರೂ, ಪಟ್ಟಿ ಜಾರಿಗೆ ಸರ್ಕಾರ ಮುಂದಾಗಿಲ್ಲ. ನ್ಯಾಯಾಂಗ ನಿಂದನೆಯಿಂದ ಪಾರಾಗಲು 2019ರ ಜುಲೈಯಲ್ಲಿ ನನ್ನನ್ನು ಸೇರಿದಂತೆ ಹುದ್ದೆ ಬದಲಾದವರಿಗೆ ಹೊಸತಾಗಿ ನೇಮಕಾತಿ ಆದೇಶ ನೀಡಲಾಗಿತ್ತು. ಅದಾಗಲೇ ಜಂಟಿ ಲೆಕ್ಕ ನಿಯಂತ್ರಕನಾಗಿದ್ದ ನಾನು, ಉಪವಿಭಾಗಾಧಿಕಾರಿಯಾದರೂ (ಕೆಎಎಸ್ ಕಿರಿಯ ಶ್ರೇಣಿ) ಆರು ತಿಂಗಳು ಸರ್ಕಾರ ಸ್ಥಳ ನಿಯುಕ್ತಿಯೇ ಮಾಡಿರಲಿಲ್ಲ. ನಿವೃತ್ತಿಗೆ ಇನ್ನೇನು ನಾಲ್ಕು ತಿಂಗಳಿದ್ದಾಗ ಹುದ್ದೆ ನೀಡಿತು’ ಎಂದು ಹಟ್ಟಿ ಬೇಸರ ವ್ಯಕ್ತಪಡಿಸಿದರು.

‘ಹೊಸ ಹುದ್ದೆಯಲ್ಲಿ ಸೇವಾ ಜ್ಯೇಷ್ಠತೆ, ಬಡ್ತಿ ಸಿಗಬೇಕಿದ್ದರೆ ಇಲಾಖಾ ಪರೀಕ್ಷೆ ಪಾಸು ಮಾಡಲೇಬೇಕೆಂದು ಡಿಪಿಎಆರ್ ಕಾರ್ಯದರ್ಶಿ ಹೇಳಿದ್ದರು. ಹೀಗಾಗಿ, 2019ರಲ್ಲೇ ಪರೀಕ್ಷೆಗೆ ನೋಂದಾಯಿಸಿದ್ದೆ. ನನ್ನ ನಿವೃತ್ತಿ ಬಳಿಕ ಪರೀಕ್ಷೆ ನಡೆಯುತ್ತಿದೆ. ಬರೆಯುವುದು ಅನಿವಾರ್ಯವಾಗಿದೆ’ ಎಂದರು. ಈ ಬಗ್ಗೆ ಪ್ರತಿಕ್ರಿಯೆಗೆ ಡಿಪಿಎಆರ್‌ ಕಾರ್ಯದರ್ಶಿಯನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಕರೆ
ಸ್ವೀಕರಿಸಲಿಲ್ಲ.

ನಿವೃತ್ತಿ ವಯಸ್ಸಿನಲ್ಲಿ ‘ನುಂಗಲಾರದ ತುತ್ತು’

ರಾಮಪ್ಪ ಹಟ್ಟಿ

‘ಕೋರ್ಟ್ ತೀರ್ಪಿನಂತೆ ಹುದ್ದೆ ಬದಲಿಸಿಕೊಂಡು ಬೇರೆ ಇಲಾಖೆಗೆ ನೇಮಕಗೊಂಡ 75 ಅಧಿಕಾರಿಗಳಿಗೆ ಪ್ರೊಬೇಷನರಿ ಅವಧಿಯಿಂದ ವಿನಾಯಿತಿ ಮತ್ತು ವೇತನ ನಿಗದಿಪಡಿಸಲು ಸರ್ಕಾರ ವಿಶೇಷ ನಿಯಮ ರೂಪಿಸಿದ್ದರೂ ಅದಿನ್ನೂ ಅಂತಿಮಗೊಂಡಿಲ್ಲ. ಸೇವಾ ಜ್ಯೇಷ್ಠತೆ ಆಧಾರದಲ್ಲಿ ಬಡ್ತಿ ಪಡೆಯಲು ಇಲಾಖಾ ಪರೀಕ್ಷೆ ಪಾಸಾಗಬೇಕೆಂಬ ಷರತ್ತು ವಿಧಿಸಿರುವುದು ನುಂಗಲಾರದ ತುತ್ತಾಗಿದೆ’ ಎನ್ನುತ್ತಾರೆ ಈ ಅಧಿಕಾರಿಗಳು.

'ಹೈಕೋರ್ಟ್‌ನಿಂದ ನ್ಯಾಯ ಸಿಕ್ಕಿದರೂ, ಸರ್ಕಾರ ತೀರ್ಪು ಅನುಷ್ಠಾನಗೊಳಿಸದೆ ಮತ್ತು ಅಮಾನವೀಯವಾಗಿ ನಡೆಸಿಕೊಂಡಿದ್ದರಿಂದ ಇಲಾಖಾ ಪರೀಕ್ಷೆ ಬರೆಯುವ ದುರದೃಷ್ಟಕರ ಸ್ಥಿತಿ ಬಂದಿದೆ' ಎಂದು ನಿವೃತ್ತ ಕೆಎಎಸ್ ಅಧಿಕಾರಿ (ಕಿರಿಯ ಶ್ರೇಣಿ) ರಾಮಪ್ಪ ಹಟ್ಟಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.