ADVERTISEMENT

ನಿವೃತ್ತಿ: ನ್ಯಾ.ಶ್ರೀನಿವಾಸ ಹರೀಶ್‌ ಕುಮಾರ್‌ ಅವರಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 16:23 IST
Last Updated 13 ಜೂನ್ 2025, 16:23 IST
<div class="paragraphs"><p>ಇದೇ 15ರಂದು ನಿವೃತ್ತಿಯಾಗುತ್ತಿರುವ ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ ಕುಮಾರ್ ಅವರಿಗೆ ‘ಬೆಂಗಳೂರು ವಕೀಲರ ಸಂಘ’ದ ವತಿಯಿಂದ&nbsp;ಶುಕ್ರವಾರ ಬೀಳ್ಕೊಡುಗೆ ನೀಡಲಾಯಿತು. </p></div>

ಇದೇ 15ರಂದು ನಿವೃತ್ತಿಯಾಗುತ್ತಿರುವ ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ ಕುಮಾರ್ ಅವರಿಗೆ ‘ಬೆಂಗಳೂರು ವಕೀಲರ ಸಂಘ’ದ ವತಿಯಿಂದ ಶುಕ್ರವಾರ ಬೀಳ್ಕೊಡುಗೆ ನೀಡಲಾಯಿತು.

   

ಬೆಂಗಳೂರು: ‘ಶ್ರೀಸಾಮಾನ್ಯನ ಭರವಸೆಯ ಪ್ರತೀಕವಾಗಿ ಉಳಿದಿರುವ ನ್ಯಾಯಾಂಗ ವ್ಯವಸ್ಥೆ ಶಾಶ್ವತವಾಗಿರುತ್ತದೆ. ಇಂತಹ ಶ್ರೇಷ್ಠವಾದ ಸಂಸ್ಥೆಯನ್ನು ಯುವ ಜನಾಂಗ ತನ್ನ ಪರಿಶ್ರಮದ ಮೂಲಕ ಸಬಲಗೊಳಿಸುವ ಭರವಸೆ ಇದೆ’ ಎಂದು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಆಶಾವಾದ ವ್ಯಕ್ತಪಡಿಸಿದರು.

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಕೀಲರ ಪರಿಷತ್‌ ವತಿಯಿಂದ ಹೈಕೋರ್ಟ್‌ನ ಕೋರ್ಟ್‌ ಹಾಲ್‌ 1ರಲ್ಲಿ ಶುಕ್ರವಾರ ನೀಡಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

'ಜಿಲ್ಲಾ ನ್ಯಾಯಾಧೀಶನಾಗಿ, ಹೈಕೋರ್ಟ್‌ ನ್ಯಾಯಮೂರ್ತಿಯಾಗಿ, ಒಟ್ಟಾರೆ 23 ವರ್ಷ ಕೆಲಸ ಮಾಡಿದ್ದೇನೆ. ಹೈಕೋರ್ಟ್‌ ನ್ಯಾಯಮೂರ್ತಿಯಾಗಿ 8 ವರ್ಷ 7 ತಿಂಗಳು ಮತ್ತು ಎರಡು ವರ್ಷಗಳ ಕಾಲ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷನಾಗಿ ದುಡಿದಿದ್ದೇನೆ’ ಎಂದು ಅವರು ತಮ್ಮ ಸೇವಾವಧಿಯನ್ನು ಸ್ಮರಿಸಿಕೊಂಡರು.

ಡಿ.ವಿ.ಗುಂಡಪ್ಪನವರ, ‘ಒಂದು ಕಡೆ ಚಿಗುರುತಲಿ; ಒಂದು ಕಡೆ ಬಾಡುತಲಿ, ಕಂದುತಿರೆ ಕೊಂಬೆ; ಮುಂಡದಲಿ ಹಬ್ಬುತಲಿ... ಎಂಬ ಮಂಕುತಿಮ್ಮನ ಕಗ್ಗವನ್ನು ಉಲ್ಲೇಖಿಸಿದ ಅವರು, ‘ನ್ಯಾಯಮೂರ್ತಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ, ನ್ಯಾಯಾಂಗ ವ್ಯವಸ್ಥೆ ದೃಢವಾಗಿರುತ್ತದೆ’ ಎಂದರು.

ನ್ಯಾ.ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರ ನಿವೃತ್ತಿಯಿಂದ ಹೈಕೋರ್ಟ್‌ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ ಈಗ 45ಕ್ಕೆ ಇಳಿದಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ಮಂಜೂರಾತಿಯ ಒಟ್ಟು ಸಂಖ್ಯೆ 63.

ಬೆಂಗಳೂರು ವಕೀಲರ ಸಂಘದ ವತಿಯಿಂದ ವಕೀಲರ ಸಭಾಂಗಣದಲ್ಲಿಯೂ ನ್ಯಾ.ಶ್ರೀನಿವಾಸ ಹರೀಶ್‌ ಕುಮಾರ್ ಅವರಿಗೆ ಶುಕ್ರವಾರ ಬೀಳ್ಕೊಡುಗೆ ನೀಡಲಾಯಿತು. ಸಂಘದ ಪದಾಧಿಕಾರಿಗಳು ಹಿರಿ–ಕಿರಿಯ ವಕೀಲರು ಇದ್ದರು.

ಶ್ರೀನಿವಾಸ ಹರೀಶ್‌ ಕುಮಾರ್ ಅವರು ಕೋಲಾರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಮಂಡಿಕಲ್‌ ಗ್ರಾಮದಲ್ಲಿ ಜನಿಸಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಪೂರೈಸಿದರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ನಂತರ ಬಿಎಂಎಸ್‌ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, ಹಿರಿಯ ವಕೀಲ ಎಂ.ಎಸ್‌.ಪುರುಷೋತ್ತಮರಾವ್‌ ಅವರ ಗರಡಿಯಲ್ಲಿ ಪಳಗಿದ ಅವರು ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆಯಲ್ಲೂ ಕೆಲಕಾಲ ವಕೀಲಿಕೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.