ADVERTISEMENT

ಹಾಸನ, ಹೊಳೆನರಸೀಪುರದಿಂದ ರೇವಣ್ಣ ಸ್ಪರ್ಧೆ?

ಸೂರಜ್‌ ರೇವಣ್ಣ, ಪ್ರಜ್ವಲ್‌ ರೇವಣ್ಣ ಸೂತ್ರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಸಮ್ಮತಿ

ಚಿದಂಬರ ಪ್ರಸಾದ್
Published 13 ಫೆಬ್ರುವರಿ 2023, 18:45 IST
Last Updated 13 ಫೆಬ್ರುವರಿ 2023, 18:45 IST
   

ಹಾಸನ: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು 2018ರ ಚುನಾವಣೆಯಲ್ಲಿ ಚನ್ನಪಟ್ಟಣ ಮತ್ತು ರಾಮನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಅನುಸರಿಸಿದ್ದ ತಂತ್ರವನ್ನೇ ಹಾಸನದಲ್ಲೂ ಜಾರಿಗೊಳಿಸಬೇಕೆಂದು ಸಂಸದ ಪ್ರಜ್ವಲ್‌ ರೇವಣ್ಣ ಮತ್ತು ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಸಲಹೆ ನೀಡಿದ್ದಾರೆ. ಅದಕ್ಕೆ ಕುಮಾರಸ್ವಾಮಿ ಸಮ್ಮತಿಯನ್ನೂ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ಆಗ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದ ಕುಮಾರಸ್ವಾಮಿ, ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿ ಗೆದ್ದಿದ್ದರು. ಅದೇ ರೀತಿ, ಹಾಸನ ಮತ್ತು ಹೊಳೆನರಸೀಪುರ ಕ್ಷೇತ್ರದಲ್ಲಿ ಎಚ್‌.ಡಿ.ರೇವಣ್ಣ ಅವರನ್ನೇ ಕಣಕ್ಕಿಳಿಸುವುದು, ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ, ಹೊಳೆನರಸೀಪುರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ, ಭವಾನಿ ರೇವಣ್ಣ ಅವರನ್ನು ಅಲ್ಲಿಂದ ಕಣಕ್ಕೆ ಇಳಿಸಿ, ಗೆಲ್ಲಿಸಿಕೊಳ್ಳುವ ಲೆಕ್ಕಾಚಾರ ಪಕ್ಷದಲ್ಲಿದೆ.

‘ಕುಮಾರಸ್ವಾಮಿ ಭಾನುವಾರ ಹೊಳೆನರಸೀಪುರಕ್ಕೆ ಭೇಟಿ ನೀಡಿದ್ದ ವೇಳೆ, ಈ ಬಗ್ಗೆ ರೇವಣ್ಣ, ಭವಾನಿ, ಪ್ರಜ್ವಲ್‌, ಸೂರಜ್‌ ಹಾಗೂ ಮುಖಂಡರ ನಡುವೆ ಚರ್ಚೆ ನಡೆಯಿತು. ಸಹೋದರರು ಮುಂದಿಟ್ಟ ಸಲಹೆ ಬಹುತೇಕ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ’ ಎಂದು
ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

‌‘ಈ ಸೂತ್ರದಿಂದ, ಹಾಸನ ಕ್ಷೇತ್ರದ ಪ್ರಬಲ ಆಕಾಂಕ್ಷಿ ಎಚ್.ಪಿ. ಸ್ವರೂಪ್‌ ಕೂಡ ತಕರಾರು ತೆಗೆಯುವುದಿಲ್ಲ. ಜೊತೆಗೆ, ಬಿಜೆಪಿ ಶಾಸಕ ಪ್ರೀತಂ ಗೌಡರು ನೀಡಿರುವ ಪಂಥಾಹ್ವಾನವನ್ನೂ ಸ್ವೀಕರಿಸಿದಂತಾಗುತ್ತದೆ. ಸ್ವತಃ ನಾವೇ ಕ್ಷೇತ್ರದಲ್ಲಿ ಬೀಡುಬಿಟ್ಟು, ತಂದೆ ರೇವಣ್ಣ ಗೆಲುವಿಗೆ ಶ್ರಮಿಸುತ್ತೇವೆ’ ಎಂಬುದು ಸಹೋದರರ ವಾದ.

ಇನ್ನೊಂದೆಡೆ, ‘ಭವಾನಿ ಅವರ ಸ್ಪರ್ಧೆಗೆ ಎಚ್‌.ಡಿ.ದೇವೇಗೌಡರೇ ಒಲವು ತೋರುತ್ತಿದ್ದು, ಅದನ್ನು ನಿರಾಕರಿಸುವುದು ಕುಮಾರಸ್ವಾಮಿ ಅವರಿಗೆ ಸುಲಭದ ಮಾತಲ್ಲ.
ಒಂದು ವೇಳೆ, ಈಗಲೇ ಭವಾನಿ ಅವರಿಗೆ ಟಿಕೆಟ್‌ ನೀಡಿದರೆ, ಕುಟುಂಬ ರಾಜಕಾರಣದ ಅಪವಾದವನ್ನು ಹೊರಬೇಕಾಗುತ್ತದೆ. ರೇವಣ್ಣ ಮಕ್ಕಳ ಸೂತ್ರವನ್ನು ಅನುಸರಿಸಿದರೆ, ಅದರಿಂದ ತಪ್ಪಿಸಿಕೊಳ್ಳಬಹುದು. ಉಪ ಚುನಾವಣೆಯ ಸಂದರ್ಭದಲ್ಲಿ ಇಂತಹ ಸಂಕಷ್ಟವೂ ಇರುವುದಿಲ್ಲ ಎಂಬ ಆಲೋಚನೆ ಕುಮಾರಸ್ವಾಮಿ ಅವರದ್ದು. ಹೀಗಾಗಿ ಈ ಸೂತ್ರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ’ ಎಂದು
ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.