ಬೆಂಗಳೂರು: ಜೂನ್ ತಿಂಗಳ ಅಂತ್ಯದೊಳಗೆ ರಾಜ್ಯದ ಎಲ್ಲ 3,614 ಕಂದಾಯ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಜತೆಗೆ ಶನಿವಾರ ವಿಡಿಯೊ ಸಂವಾದ ನಡೆಸಿದ ಅವರು, ‘ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಕಡುಬಡವರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬ ಉದ್ದೇಶದಿಂದಲೇ ಕಂದಾಯ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುವ ನೀತಿಯನ್ನು 2017ರಲ್ಲಿ ರೂಪಿಸಲಾಗಿತ್ತು. ಆದರೆ, ಹಲವು ವರ್ಷಗಳ ನಂತರವೂ ಈ ಕೆಲಸ ಪೂರ್ಣವಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ 3,614 ಕಂದಾಯ ಗ್ರಾಮಗಳು ಇದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಸೂಚನೆ ಹೊರಡಿಸಿ 1,400 ಗ್ರಾಮಗಳನ್ನು ರಚಿಸಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ 1,200 ಗ್ರಾಮಗಳನ್ನು ರಚಿಸಲಾಗಿದೆ. ಅಂತಿಮ ಅಧಿಸೂಚನೆ ಆಗದ 1,014 ಗ್ರಾಮಗಳಿವೆ. ಈ ಕೆಲಸವನ್ನು ಶೀಘ್ರ ಮುಗಿಸಬೇಕು’ ಎಂದರು.
‘ಜುಲೈನಿಂದ ಜನಗಣತಿ ಆರಂಭವಾಗುವ ಸಾಧ್ಯತೆ ಇದೆ. ಹಾಗೆ ಆದರೆ, ಆನಂತರ ಅಧಿಸೂಚನೆ ಹೊರಡಿಸಲು ಆಗುವುದಿಲ್ಲ. ಹೀಗಾಗಿ ಜೂನ್ ಅಂತ್ಯದೊಳಗೇ ಎಲ್ಲ ಗ್ರಾಮಗಳಿಗೂ ಅಧಿಸೂಚನೆ ಹೊರಡಿಸಿ, ಜುಲೈ ನಂತರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು’ ಎಂದು ಸೂಚಿಸಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್ ಕುಮಾರ್ ಮತ್ತು ಭೂ ಮಾಪನಾ ಇಲಾಖೆ ಆಯುಕ್ತ ಮಂಜುನಾಥ್ ಸಭೆಯಲ್ಲಿ ಉಪಸ್ಥಿತರಿದ್ದರು.
1 ಲಕ್ಷ ಜನರಿಗೆ ಹಕ್ಕುಪತ್ರ
‘ಅಂತಿಮ ಅಧಿಸೂಚನೆ ಹೊರಡಿಸಲಾದ 2,600 ಗ್ರಾಮಗಳ 1 ಲಕ್ಷ ಫಲಾನುಭವಿಗಳಿಗೆ ಇದೇ ಮೇ 20ರಂದು ಹಕ್ಕುಪತ್ರ ವಿತರಿಸುತ್ತೇವೆ’ ಎಂದು ಕೃಷ್ಣ ಬೈರೇಗೌಡ ಅವರು ಹೇಳಿದರು.
‘ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಸಂಬಂಧ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಆಯೋಜಿಸಲಾಗಿದೆ.
ಒಟ್ಟು 1.41 ಲಕ್ಷ ಫಲಾನುಭವಿಗಳಿದ್ದು, ಈವರೆಗೆ 92,719 ಹಕ್ಕುಪತ್ರಗಳನ್ನು ಸಿದ್ದಪಡಿಸಿದ್ದೀರಿ. ಉಳಿದವರ ಹಕ್ಕುಪತ್ರಗಳನ್ನೂ ಸಿದ್ದಪಡಿಸಿ’ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.