ADVERTISEMENT

ರಾಜ್ಯದಲ್ಲಿ ಬಡ್ತಿ ಮೀಸಲಾತಿ ನೀತಿ ಮರುಪರಿಶೀಲನೆ?

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 19:30 IST
Last Updated 28 ಜನವರಿ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸರ್ಕಾರಿ ನೌಕರರಿಗೆ ಬಡ್ತಿಯಲ್ಲೂ ಮೀಸಲಾತಿ ನಿಗದಿಪಡಿಸುವುದಕ್ಕೆ ಅದನ್ನು ಸಮರ್ಥಿಸುವಂತಹ ಬೃಹತ್‌ ಪ್ರಮಾಣದ ಅಂಕಿಅಂಶ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಹೇಳಿರುವ ಕಾರಣದಿಂದ ರಾಜ್ಯದಲ್ಲಿನ ಬಡ್ತಿ ಮೀಸಲಾತಿ ನೀತಿ ಕುರಿತು ರಾಜ್ಯ ಸರ್ಕಾರ ಮರುಪರಿಶೀಲನೆಗೆ ಮುಂದಾಗುವ ಸಾಧ್ಯತೆ ಇದೆ.

ಹಾಗಾದಲ್ಲಿ, ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಸಾವಿರಾರು ಸರ್ಕಾರಿ ನೌಕರರು ಸಮಸ್ಯೆಗೆ ಸಿಲುಕಲಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ನ್ಯಾಯಾಲಯದ ನಿಲುವಿನ ಕುರಿತು ತಕ್ಷಣಕ್ಕೆ ನನಗೆ ಮಾಹಿತಿ ಇಲ್ಲ. ವಿಸ್ತೃತವಾದ ಮಾಹಿತಿ ಪಡೆದ ಬಳಿಕ ಅಧಿಕಾರಿಗಳ ಜತೆ ಚರ್ಚಿಸಿ, ಮುಂದುವರಿಯಲಾಗುವುದು’ ಎಂದರು.

ADVERTISEMENT

ಎಸ್‌.ಸಿ ಮತ್ತು ಎಸ್‌.ಟಿ ಸಮುದಾಯಗಳಿಗೆ ಸೇರಿದ ನೌಕರರಿಗೆ 1978ರಿಂದಲೂ ಬಡ್ತಿಯಲ್ಲಿ ಮೀಸಲಾತಿ ನೀಡಿದ್ದ ತೀರ್ಮಾನವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್‌ 2017ರ ಫೆಬ್ರುವರಿಯಲ್ಲಿ ತೀರ್ಪು ನೀಡಿತ್ತು. ಪರಿಣಾಮವಾಗಿ 3,700 ನೌಕರರಿಗೆ ಹಿಂಬಡ್ತಿಯಾಗಿತ್ತು. 5,000 ನೌಕರರಿಗೆ ಬಡ್ತಿ ದೊರೆತರೆ, 65,000 ನೌಕರರ ಸೇವಾ ಜೇಷ್ಠತೆಯಲ್ಲಿ ಬದಲಾವಣೆಯಾಗಿತ್ತು.

ಸುಪ್ರೀಂಕೋರ್ಟ್‌ ತೀರ್ಪಿನಿಂದ ತೊಂದರೆಗೆ ಸಿಲುಕಿದ ನೌಕರರ ಹಿತರಕ್ಷಿಸಲು ರಾಜ್ಯ ಸರ್ಕಾರ, ಸರ್ಕಾರಿ ನೌಕರರ ಜೇಷ್ಠತೆ ಸಂರಕ್ಷಣಾ ಕಾಯ್ದೆ–2017 ಅನ್ನು ಜಾರಿಗೆ ತಂದಿತ್ತು. 2017ರ ನವೆಂಬರ್‌ನಲ್ಲಿ ಈ ಮಸೂದೆಗೆ ವಿಧಾನಮಂಡಲದ ಅಂಗೀಕಾರ ದೊರಕಿತ್ತು. ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠ ಈ ಕಾಯ್ದೆಯನ್ನು ಎತ್ತಿಹಿಡಿದು 2019ರ ಮೇ ತಿಂಗಳಲ್ಲಿ ತೀರ್ಪು ನೀಡಿತ್ತು.

‘ಈ ಪ್ರಕರಣದಲ್ಲಿ 2019ರಲ್ಲಿ ನ್ಯಾಯಪೀಠವು ನೀಡಿರುವ ತೀರ್ಪು ಕಾನೂನಿನ ದೃಷ್ಟಿಯಿಂದ ತಪ್ಪಿನಿಂದ ಕೂಡಿದೆ. ಇದೇ ವಿಚಾರದಲ್ಲಿ ಎಂ. ನಾಗರಾಜ್‌ ಪ್ರಕರಣದಲ್ಲಿ 2006ರಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ ನೀಡಿದ ಮೂಲ ತತ್ವಗಳನ್ನು ಉಲ್ಲಂಘಿಸಲಾಗಿದೆ’ ಎಂದು ಸುಪ್ರೀಂಕೋರ್ಟ್‌ನ ಮತ್ತೊಂದು ಪೀಠ ಶುಕ್ರವಾರ ನೀಡಿದ ತೀರ್ಪಿನಲ್ಲಿ ಹೇಳಿದೆ.

‘ಬಡ್ತಿಯಲ್ಲಿ ಮೀಸಲಾತಿಯನ್ನು ಸಮರ್ಥಿಸಬಲ್ಲ ಬೃಹತ್‌ ಪ್ರಮಾಣದ ಅಂಕಿಅಂಶವನ್ನು ವೃಂದವಾರು ಒದಗಿಸಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಎಲ್ಲ ನೌಕರರನ್ನೂ ಒಟ್ಟಾಗಿ ಪರಿಗಣಿಸಿ ಅಂಕಿಅಂಶ ಪಡೆಯುವಂತಿಲ್ಲ. 2017ರ ಕಾನೂನಿನಲ್ಲೇ ದೋಷಗಳಿದ್ದವು. ಎಸ್‌.ಸಿ ಮತ್ತು ಎಸ್‌.ಸಿ ನೌಕರರ ಪ್ರಮಾಣವನ್ನು ಲೆಕ್ಕ ಹಾಕುವುದರಲ್ಲಿ ತಪ್ಪುಗಳಗಿದ್ದವು’ ಎನ್ನುತ್ತಾರೆ ಅಲ್ಪಸಂಖ್ಯಾತ ಮತ್ತು ಹಿಂದುಳಿದ ನೌಕರರ ಒಕ್ಕೂಟದ ಅಧ್ಯಕ್ಷ ಎಂ. ನಾಗರಾಜ್‌.

‘ಕರ್ನಾಟಕದಲ್ಲಿ ಐದು ಲಕ್ಷ ಸರ್ಕಾರಿ ನೌಕರರಿದ್ದಾರೆ. ಇಲ್ಲಿ ಎಸ್‌.ಸಿ ಮತ್ತು ಎಸ್‌.ಟಿ ಸಮುದಾಯಗಳಿಗೆ ಶೇ 18ರಷ್ಟು ಮೀಸಲಾತಿ ಇದೆ. ಆ ಪ್ರಕಾರ ಈ ಎರಡೂ ಸಮುದಾಯದ 90,000 ನೌಕರರು ಇರಬೇಕು. ಆದರೆ, ಎಸ್‌.ಸಿ ಮತ್ತು ಎಸ್‌.ಟಿ ಸಮುದಾಯಗಳಿಗೆ ಸೇರಿದ 85,000 ನೌಕರರು ಮಾತ್ರ ಇದ್ದಲ್ಲಿ ಕೊರತೆ ಎಂದು ವಾದಿಸಲಾಗುತ್ತಿದೆ. ಅದರ ಆಧಾರದಲ್ಲೇ ಬಡ್ತಿಯಲ್ಲೂ ಮೀಸಲಾತಿ ಮುಂದುವರಿಸಲಾಗಿದೆ. ಆದರೆ, ಈಗ ವೃಂದವಾರು ಮೀಸಲಾತಿ ನಿರ್ಧರಿಸಲು ಸುಪ್ರೀಂಕೋರ್ಟ್‌ ಹೇಳಿದೆ. ಅದರ ಪ್ರಕಾರವೇ ಎಲ್ಲವೂ ಆಗಬೇಕಿದೆ’ ಎಂದು ವಿವರಿಸಿದರು.

‘ಸುಪ್ರೀಂಕೋರ್ಟ್‌ನ ಈ ಆದೇಶದ ಆಧಾರದಲ್ಲಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಈಗ ಸರ್ಕಾರ ಬಡ್ತಿ ಮೀಸಲಾತಿ ನೀತಿಯನ್ನು ಮರುಪರಿಶೀಲನೆ ಮಾಡಲೇಬೇಕಾಗುತ್ತದೆ’ ಎಂದು ನಾಗರಾಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.