ADVERTISEMENT

ನಾಲ್ಕು ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿದ ಕುವೆಂಪು ಹೋರಾಟ ಸಮಿತಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 10:13 IST
Last Updated 18 ಜೂನ್ 2022, 10:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪರಿಷ್ಕೃತ ಪಠ್ಯಪುಸ್ತಕಗಳನ್ನು ವಾಪಸ್ ಪಡೆಯುವುದು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರಾಜೀನಾಮೆ, ರೋಹಿತ್ ಚಕ್ರತೀರ್ಥ ಬಂಧನ ಸೇರಿದಂತೆ ನಾಲ್ಕು ಬೇಡಿಕೆಗಳುಳ್ಳ ಹಕ್ಕೊತ್ತಾಯವನ್ನು ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ರಾಜ್ಯ ಸರ್ಕಾರದ ಮುಂದೆ ಮಂಡಿಸಲು ನಿರ್ಧರಿಸಿದೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಜಿ.ಬಿ. ಪಾಟೀಲ್ ನಾಲ್ಕು ಬೇಡಿಕೆಗಳುಳ್ಳ ಹಕ್ಕೊತ್ತಾಯ ಮಂಡಿಸಿದರು. ವಿವಿಧ ಮಠಾಧೀಶರು, ಸಾಹಿತಿಗಳು, ಎಚ್.ಡಿ. ದೇವೇಗೌಡ, ಡಿ.ಕೆ.‌ ಶಿವಕುಮಾರ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಈ ಹಕ್ಕೊತ್ತಾಯಕ್ಕೆ ಸಹಿ ಮಾಡಿದ್ದಾರೆ.

ಸಭೆಯಲ್ಲಿ ಅನುಮೋದಿಸಿದ ಹಕ್ಕೊತ್ತಾಯದ ಬೇಡಿಕೆಗಳು ಈ ಕೆಳಗಿನಂತಿವೆ:

ADVERTISEMENT

* ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರೂಪಿಸಿರುವ ಪರಿಷ್ಕೃತ ಪಠ್ಯಪುಸ್ತಕಗಳನ್ನು ತಕ್ಷಣ ವಾಪಸ್ ಪಡೆಯಬೇಕು.

* ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ರೂಪಿಸಿದ್ದ ಹಳೆಯ ಪಠ್ಯಪುಸ್ತಕಗಳನ್ನು ಮುಂದುವರಿಸಬೇಕು.

* ನಾಡಗೀತೆ, ನಾಡ ಬಾವುಟ ಮತ್ತು ಕುವೆಂಪು ಅವರಿಗೆ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥ ವಿರುದ್ಧ ದೇಶದ್ರೋಹ, ನಾಡದ್ರೋಹ ಆರೋಪದಡಿ ಮೊಕದ್ದಮೆ ದಾಖಲಿಸಿ, ಬಂಧಿಸಬೇಕು.

* ಪಠ್ಯಪುಸ್ತಕಗಳ ಪರಿಷ್ಕರಣೆ ವಿವಾದಕ್ಕೆ ಕಾರಣರಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಂದ ತಕ್ಷಣ ರಾಜೀನಾಮೆ ಪಡೆಯಬೇಕು.

ಈ ಬೇಡಿಕೆಗಳನ್ನು ಈಡೇರಿಸಲು ಹತ್ತು ದಿನಗಳ ಗಡುವು ನೀಡಲು ನಿರ್ಧರಿಸಲಾಗಿದೆ. ಹತ್ತು ದಿನಗಳ ಬಳಿಕ ಮುಂದಿನ ಹೋರಾಟ ಕೈಗೊಳ್ಳುವುದಾಗಿ ಸಮಿತಿ ಅಧ್ಯಕ್ಷ ಜಿ.ಬಿ. ಪಾಟೀಲ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.