ADVERTISEMENT

ನಾಲ್ಕು ನಗರಗಳಲ್ಲಿ ರಿಂಗ್ ರಸ್ತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೇಲ್ಸೇತುವೆ, ಕೆಳ ಸೇತುವೆ ನಿರ್ಮಿಸಲು ₹1 ಸಾವಿರ ಕೋಟಿ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 20:27 IST
Last Updated 5 ಜನವರಿ 2023, 20:27 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಾಯಚೂರು, ಕೊಪ್ಪಳ, ಗದಗ, ಶಿವಮೊಗ್ಗ ರಿಂಗ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಇದೇ ವರ್ಷದಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕುರಿತು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ರಸ್ತೆಗಳ ಅಭಿವೃದ್ಧಿಗೆ ಭೂಸ್ವಾಧೀನ ಮಾಡಿಕೊಡುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಅದನ್ನು ನಿರ್ವಹಿಸಲು ಒಪ್ಪಿಗೆ ಸೂಚಿಸಲಾಗಿದೆ’ ಎಂದರು.

‘ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಶೇ 50ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. ಈ ಪದ್ಧತಿಯನ್ನು ಬದಲಾಯಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಅನುದಾನ ಒದಗಿಸುವ ಬದಲು ಕಾಮಗಾರಿಗೆ ಪೂರೈಸುವ ಮರಳು, ಜಲ್ಲಿ ಮೇಲೆ ರಾಯಲ್ಟಿ ಮತ್ತು ಕಾಮಗಾರಿ ಮೇಲೆ ಜಿಎಸ್‌ಟಿ ವಿಧಿಸದೆ ಸಹಕಾರ ನೀಡುವ ಬಗ್ಗೆ ಚರ್ಚೆ ನಡೆದಿದೆ’ ಎಂದು ತಿಳಿಸಿದರು. ‌‌

ADVERTISEMENT

ಹೊಸಪೇಟೆ–ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಗುತ್ತಿಗೆದಾರರನ್ನು ಬದಲಿಸಿ ಹೊಸದಾಗಿ ಟೆಂಡರ್ ಕರೆಯಲು ನಿರ್ಧರಿಸಲಾಗಿದ್ದು, ಫೆಬ್ರುವರಿಯಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ರೈಲ್ವೆ ಹಳಿಗಳ ಮೇಲೆ ರಸ್ತೆಗಳು ಹಾದು ಹೋಗಿರುವ ರಾಜ್ಯದ ಹಲವೆಡೆ ವಾಹನ ದಟ್ಟಣೆ ಉಂಟಾಗುತ್ತಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲದಿದ್ದರೂ ಮೇಲ್ಸೇತುವೆ ಮತ್ತು ಕೆಳ ಸೇತುವೆ ನಿರ್ಮಿಸಲು ₹1 ಸಾವಿರ ಕೋಟಿ ಅನುದಾನ ಒದಗಿಸಲು ನಿತಿನ್ ಗಡ್ಕರಿ ಅವರು ಒಪ್ಪಿಕೊಂಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ₹46,840 ಕೋಟಿ ಮೊತ್ತದ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಇನ್ನೂ ₹1 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗೆ ಪ್ರಸ್ತಾವನೆ ಸಿದ್ಧವಾಗಬೇಕಿದೆ. ಅದನ್ನು ತ್ವರಿತವಾಗಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದರು.

ಶಿರಾಡಿ ಘಾಟಿಯಲ್ಲಿ ₹10 ಸಾವಿರ ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡುವುದಾಗಿ ನಿತಿನ್ ಗಡ್ಕರಿ ಅವರು ಒಪ್ಪಿಗೆ ಸೂಚಿಸಿದ್ದಾರೆ. ಇದು ದೀರ್ಘಕಾಲದ ಯೋಜನೆಯಾಗಿದ್ದು, ಕರಾವಳಿ ಮತ್ತು ರಾಜಧಾನಿಗೆ ಜೀವನಾಡಿಯಾಗಿರುವ ಈ ರಸ್ತೆಯನ್ನು ಶಿರಾಡಿ ಘಾಟಿಯಲ್ಲಿ ನಾಲ್ಕುಪಥವಾಗಿಸುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂಬ ವಿಷಯವನ್ನೂ ಅಧಿಕಾರಿಗಳು ಗಮನಕ್ಕೆ ತಂದರು ಎಂದು ವಿವರಿಸಿದರು.

ಬೆಂಗಳೂರು ನಗರದ ಸುತ್ತ 12 ಉಪನಗರಗಳ ಮೂಲಕ 288 ಕಿಲೋ ಮೀಟರ್ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ(ಎಸ್‌ಟಿಆರ್‌ಆರ್‌) ನಿರ್ಮಿಸಲಾಗುತ್ತಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಹಾದು ಹೋಗುತ್ತಿದ್ದ ಮಾರ್ಗವನ್ನು ಬದಲಿಸಲು ಸಚಿವರು ಒಪ್ಪಿಕೊಂಡಿ
ದ್ದಾರೆ. ರಾಷ್ಟ್ರೀಯ ಉದ್ಯಾನಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ
ಎಂದರು.

ಫೆಬ್ರುವರಿಯಲ್ಲಿ ದಶಪಥ ಲೋಕಾರ್ಪಣೆ: ನಿತಿನ್ ಗಡ್ಕರಿ

‘ಬೆಂಗಳೂರು- ಮೈಸೂರು ನಡುವಿ‌ನ ದಶಪಥಗಳ ಹೆದ್ದಾರಿಯನ್ನು ಫೆಬ್ರುವರಿ ಅಂತ್ಯದಲ್ಲಿ ಉದ್ಘಾಟಿಸಲಾಗುವುದು’ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಗುರುವಾರ ನೂತನ ಎಕ್ಸ್‌ಪ್ರೆಸ್‌ ಕಾಮಗಾರಿಯ ವೈಮಾನಿಕ ವೀಕ್ಷಣೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಇಲ್ಲವೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಾಗುವುದು ಎಂದರು.

ಅರಣ್ಯ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಇರುವ ಅನುಮತಿಗಳನ್ನು ರಾಜ್ಯ ಸರ್ಕಾರ ನೀಡಿದರೆ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯನ್ನು 2024ರ ಜನವರಿ 26ರಂದು ವಾಹನ ಸಂಚಾರಕ್ಕೆ ಸಮರ್ಪಿಸಲಾಗುವುದು. ಕಾಮಗಾರಿ ಪೂರ್ಣಗೊಳಿಸಲು 2024ರ ಮಾರ್ಚ್‌ ತನಕ ಗಡುವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.