ADVERTISEMENT

ಗಡಿ ರಕ್ಷಣಾ ವ್ಯಾಪ್ತಿಗೆ ನದಿಗಳ ರಕ್ಷಣೆ

ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್‌ ಜವಾಬ್ದಾರಿ ದ್ವಿಗುಣ

ಬಿ.ಎಸ್.ಷಣ್ಮುಖಪ್ಪ
Published 3 ನವೆಂಬರ್ 2018, 20:01 IST
Last Updated 3 ನವೆಂಬರ್ 2018, 20:01 IST
ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್‌
ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್‌   

ಬೆಂಗಳೂರು: ನದಿಗಳ ವ್ಯಾಜ್ಯ ನಿರ್ವಹಣೆಯ ಹೊಣೆಯನ್ನೂ ಗಡಿ ರಕ್ಷಣಾ ಆಯೋಗದ ವ್ಯಾಪ್ತಿಗೆ ವಹಿಸಿ, ‘ಕರ್ನಾಟಕ ಗಡಿ ಮತ್ತು ರಾಜ್ಯ ನದಿಗಳ ರಕ್ಷಣಾ ಆಯೋಗ’ ಎಂದು ಪುನರ್‌ ನಾಮಕರಣ ಮಾಡಿ ರಾಜ್ಯ ಸರ್ಕಾರ ಕಳೆದ ತಿಂಗಳ 30ರಂದು ಆದೇಶಿಸಿದೆ.

ಗಡಿ ರಕ್ಷಣಾ ಆಯೋಗದ ಹಾಲಿ ಅಧ್ಯಕ್ಷ ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್‌ ಅವರೇ ನದಿಗಳ ರಕ್ಷಣಾ ಆಯೋಗಕ್ಕೂ ಅಧ್ಯಕ್ಷರಾಗಿರುತ್ತಾರೆ. ಈ ಪುನರ್‌ ನಾಮಕರಣ ತಕ್ಷಣದಿಂದಲೇ ಜಾರಿಗೆ ಬಂದಿದೆ.

ಗಡಿ ರಕ್ಷಣಾ ಆಯೋಗದ ಸದಸ್ಯರು, ಅಡ್ವೊಕೇಟ್‌ ಜನರಲ್, ಕಾನೂನು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಗೃಹ, ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಆಯೋಗದ ಪದನಿಮಿತ್ತ ಸದಸ್ಯರಾಗಿರುತ್ತಾರೆ.

ADVERTISEMENT

ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ, ಕೃಷ್ಣಾ ಜಲಭಾಗ್ಯ ನಿಗಮ, ಕಾವೇರಿ ನೀರಾವರಿ ಹಾಗೂ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ನೀರಾವರಿ ತಜ್ಞರೊಬ್ಬರನ್ನು ಸಮಿತಿಗೆ ನಾಮ ನಿರ್ದೇಶನ ಮಾಡಲಾಗುವುದು. ಈ ಆಯೋಗಕ್ಕೆ ಕಾನೂನು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

‘ಸರ್ಕಾರ ಗಡಿ ಆಯೋಗದ ವ್ಯಾಪ್ತಿಗೆ ನದಿಗಳ ವ್ಯಾಜ್ಯಗಳನ್ನೂ ತಂದಿರುವುದು ಸೂಕ್ತವಾಗಿದೆ. ರಾಜ್ಯದ ಗಡಿ ಭಾಗದ ನದಿಗಳ ವ್ಯಾಜ್ಯಗಳು ಶೀಘ್ರ ಇತ್ಯರ್ಥವಾಗಬೇಕು. ಇದರಿಂದ, ಬೆಳೆಯುತ್ತಿರುವ ನಗರಗಳ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗಲಿದೆ’ ಎನ್ನುವುದು ನ್ಯಾಯಮೂರ್ತಿ ಮಂಜುನಾಥ್‌ ಅವರ ಆಶಯವಾಗಿದೆ.

13ರಂದು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ

ಮಹದಾಯಿ ನೀರು ಹಂಚಿಕೆ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ಇದೇ ವರ್ಷದ ಆಗಸ್ಟ್‌ 14ರಂದು ನೀಡಿರುವ ಆದೇಶ ಪ್ರಶ್ನಿಸಿ ಇದೇ 13ರಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದೆ.

‘ನ್ಯಾಯಮಂಡಳಿ ಆದೇಶದ ಕುರಿತು ಸ್ಪಷ್ಟನೆ ಪಡೆಯಲು ನ್ಯಾಯಮಂಡಳಿಗೂ ಮನವಿ ಸಲ್ಲಿಸಲಾಗುವುದು’ ಎಂದು ಕೆ.ಎಲ್‌.ಮಂಜುನಾಥ್‌ ’ಪ್ರಜಾವಾಣಿ’ಗೆ ತಿಳಿಸಿದರು.

‘ಈ ಕುರಿತು ಅಡ್ವೊಕೇಟ್ ಜನರಲ್‌, ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ರಾಜ್ಯದ ಪರವಾದ ವಕೀಲರ ತಂಡ ಹಾಗೂ ತಜ್ಞರ ಜೊತೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ’ ಎಂದು ಹೇಳಿದರು.

*ರಾಜ್ಯದ ನದಿಗಳ ರಕ್ಷಣೆ ವಿಷಯದಲ್ಲಿ ಆಯೋಗ ಶಕ್ತಿಮೀರಿ ಪ್ರಯತ್ನಿಸಲಿದೆ. ವಿವಾದ ಇರುವ ನದಿ ಪ್ರದೇಶಗಳಲ್ಲಿ ಸ್ಥಳೀಯ ಅಂಶಗಳ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು

-ಕೆ.ಎಲ್‌.ಮಂಜುನಾಥ್, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.