ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ವಾರಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮಂಗಳೂರು ಸಮೀಪದ ಅಡ್ಯಾರ್‌ನ ಜಲಪಾತವೊಂದರಲ್ಲಿ ಪ್ರವಾಸಿಗರು ನೀರಾಟದಲ್ಲಿ ನಿರತರಾಗಿದ್ದರು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರು/ಮಡಿಕೇರಿ : ಕರಾವಳಿ, ಮಲೆನಾಡು ಪ್ರದೇಶ ಸೇರಿದಂತೆ ರಾಜ್ಯದ ವಿವಿಧೆಡೆ ಭಾನುವಾರವೂ ಮಳೆ ಮುಂದುವರಿದಿದೆ. ಕೆಲವೆಡೆ ಮಳೆ ಬಿರುಸಾಗಿದ್ದು ನದಿಗಳು ತುಂಬಿ ಹರಿದಿವೆ. ಜಲಪಾತಗಳು ಮೈದುಂಬಿಕೊಂಡಿವೆ. ಉತ್ತರಕನ್ನಡ
ದಲ್ಲಿ ಮನೆಗಳು ಜಲಾವೃತವಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರವೂ ಉತ್ತಮ ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆವರೆಗೂ ಬಿಟ್ಟು ಬಿಟ್ಟು ಧಾರಾಕಾರ ಮಳೆ ಸುರಿಯಿತು. ಕೊಡಗು ಜಿಲ್ಲೆಯಲ್ಲಿ ಭಾರಿ ಗಾಳಿ–ಮಳೆ ಮುಂದುವರಿಯಿತು.ಸೋಮವಾರ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹಾರಂಗಿ ಜಲಾಶಯಕ್ಕೆ ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ಭಾರಿ ಪ್ರಮಾಣದ ನೀರು ಹರಿದು ಬಂದಿತು. ಬೆಳಿಗ್ಗೆ 8ಕ್ಕೆ 4,691 ಕ್ಯುಸೆಕ್ ಇದ್ದ ಒಳಹರಿವು 11ರ ವೇಳೆಗೆ 7,720 ಕ್ಯುಸೆಕ್‌ಗೆ ಏರಿಕೆ ಆಗುತ್ತಿದ್ದಂತೆ ಕಾವೇರಿ ಮತ್ತು ಹಾರಂಗಿ ನದಿ ದಂಡೆಯ ನಿವಾಸಿಗಳಿಗೆ ಪ್ರವಾಹದ ಮುನ್ನಚ್ಚರಿಕೆ ನೀಡಲಾಗಿದ್ದು, 5ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು. ಕಾವೇರಿ ನದಿ ಸೇರಿದಂತೆ ಜಿಲ್ಲೆಯ ಎಲ್ಲ ನದಿಗಳಲ್ಲೂ ನೀರಿನ ಪ್ರಮಾಣ ಏರಿಕೆಯಾಗಿದ್ದು, ನದಿ ದಂಡೆಯ ನಿವಾಸಿಗಳಲ್ಲಿ ಆತಂಕ ಮೂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರಾ, ಫಲ್ಗುಣಿ, ಶಾಂಭವಿ ಹಾಗೂ ನಂದಿನಿ ತುಂಬಿ ಹರಿಯುತ್ತಿದೆ.
ರಾಜ್ಯದ ಕರಾವಳಿಯಲ್ಲಿ ಇನ್ನೂ ಐದು ದಿನ ಗುಡುಗು ಸಹಿತ ಭಾರಿ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ ಜಿಲ್ಲೆಯಲ್ಲೂ ಭಾನುವಾರ ದಿನವಿಡೀ ಮಳೆ ಸುರಿದಿದೆ.
(ಶಿವಮೊಗ್ಗ/ತೀರ್ಥಹಳ್ಳಿ ವರದಿ): ಆಗುಂಬೆ ಘಾಟಿಯ 4 ಮತ್ತು 5ನೇ ತಿರುವಿನಲ್ಲಿ ಮಧ್ಯರಾತ್ರಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದೆ. ನಡುರಾತ್ರಿ ಆಗುಂಬೆ ಮತ್ತು ಹೆಬ್ರಿ ಪೊಲೀಸರು ವಾಹನಗಳಿಗೆ ಬದಲಿ ಮಾರ್ಗಗಳನ್ನು ಸೂಚಿಸಿ ಸವಾರರಿಗೆ ಸಹಕರಿಸಿದ್ದಾರೆ.
ಬೆಳಿಗ್ಗೆ ಒಂದು ಬಸ್ ಈ ಮಾರ್ಗದಲ್ಲಿ ಹೋಗಿದ್ದು, ತಕ್ಕಮಟ್ಟಿಗಿನ ವಾಹನ ಸಂಚಾರ ಆರಂಭವಾಗಿದೆ. ಮತ್ತೆ ಮಳೆ ಸುರಿದರೆ ಮತ್ತಷ್ಟು ಗುಡ್ಡ ಜರುಗುವ ಆತಂಕ ಎದುರಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ, ವರದಾ, ಕುಮದ್ವತಿ, ತುಂಗಾ, ಭದ್ರಾ ನದಿಗಳು ಮೈದುಂಬಿವೆ. ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಅತಿಹೆಚ್ಚು 26.65 ಸೆಂ.ಮೀ ಮಳೆ ದಾಖಲಾಗಿದೆ. ಹುಲಿಕಲ್‌ನಲ್ಲಿ 26.49 ಸೆಂ.ಮೀ ಮಳೆ ಸುರಿದಿದೆ.
ಕಲಬುರಗಿ ವರದಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಭಾನುವಾರವೂ ಮಳೆ ಮುಂದುವರೆದಿದೆ. ಬೀದರ್ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಬಿರುಸಿನ ಮಳೆಯಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ, ಕಾಳಗಿ, ಶಹಾಬಾದ್‌ನಲ್ಲಿ ಕೆಲ ಹೊತ್ತು ಮಳೆಯಾಗಿದೆ.
ಹುಬ್ಬಳ್ಳಿ ವರದಿ: ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಭಾನುವಾರ ಇಡೀ ದಿನ ಬಿರುಸಿನ ಮಳೆ ಸುರಿಯಿತು. ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ಮಳೆ ಸುರಿದಿದ್ದರಿಂದ ಮನೆ ಕುಸಿತ, ಜಲಾವೃತ ಸಮಸ್ಯೆಗಳು ಉಂಟಾದವು. ಕೆಲವೆಡೆ ಶನಿವಾರ ತಡರಾತ್ರಿಯಿಂದಲೂ ನಿರಂತರವಾಗಿ ಮಳೆ ಸುರಿದ ಪರಿಣಾಮ ಗಂಗಾವಳಿ, ಅಘನಾಶಿನಿ, ಗುಂಡಬಾಳ ಸೇರಿದಂತೆ ಹಲವು ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿತು. ಕಾರವಾರ ತಾಲ್ಲೂಕಿನ ಇಡೂರು ಗ್ರಾಮದಲ್ಲಿನ 20ಕ್ಕೂ ಹೆಚ್ಚು ಮನೆಗಳ ಸುತ್ತ ನೀರು ನಿಂತಿದ್ದರಿಂದ ಜನರು ಹೊರಕ್ಕೆ ತೆರಳಲು ಪರದಾಡಿದರು.
ಗಗನಚುಕ್ಕಿ ಜಲಪಾತಕ್ಕೆ ಜೀವಕಳೆ
ಮಳವಳ್ಳಿ(ಮಂಡ್ಯ): ಕಳೆದ ಒಂದೂವರೆ ವರ್ಷದಿಂದ ನೀರಿಲ್ಲದೆ ಭಣಗುಡುತ್ತಿದ್ದ ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ಗಗನಚುಕ್ಕಿ ಜಲಪಾತಕ್ಕೆ ಜೀವಕಳೆ ಬಂದಿದೆ. ಭಾನುವಾರ ಪ್ರವಾಸಿಗರ ದಂಡು ಬಂದಿತ್ತು.
ಕೇರಳದ ವಯನಾಡು ಪ್ರದೇಶದಲ್ಲಿ ಉತ್ತಮ ಮಳೆ ಬೀಳುತ್ತಿರುವುರಿಂದಾಗಿ, ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಿದ್ದು, ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಜಲಪಾತ ಆಕರ್ಷಣೆ ಪಡೆದುಕೊಂಡಿದೆ. ಎತ್ತರದಿಂದ ಧುಮ್ಮಿಕ್ಕುವ ಗಗನಚುಕ್ಕಿ ಜಲಪಾತ ಹಾಗೂ ಕಲ್ಲು ಬಂಡೆಗಳ ನಡುವೆ ಭೋರ್ಗರೆಯುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.