ADVERTISEMENT

ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 19:56 IST
Last Updated 27 ಜುಲೈ 2019, 19:56 IST
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು, ಮದ್ದೂರು ಬಳಿಯ ಗೆಜ್ಜಲಗೆರೆ ಕಾಲೋನಿ ಬಳಿ ಶನಿವಾರ ಕೆಎಸ್ಆರ್‌ಟಿಸಿ ಬಸ್‌ಗೆ ಡಿಕ್ಕಿಯಾಗಿರುವುದು
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು, ಮದ್ದೂರು ಬಳಿಯ ಗೆಜ್ಜಲಗೆರೆ ಕಾಲೋನಿ ಬಳಿ ಶನಿವಾರ ಕೆಎಸ್ಆರ್‌ಟಿಸಿ ಬಸ್‌ಗೆ ಡಿಕ್ಕಿಯಾಗಿರುವುದು   

ಮದ್ದೂರು (ಮಂಡ್ಯ ಜಿಲ್ಲೆ): ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಬಳಿ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಹೆಬ್ಬಕವಾಡಿ ಗ್ರಾಮದ ರವಿ (31), ಪತ್ನಿ ಮಂಜುಳಾ (28), ಪುತ್ರಿ ಸುಕನ್ಯಾ (10), ಪುತ್ರ ಸಾಗರ್‌ (5) ಮೃತಪಟ್ಟವರು.

ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ರವಿ, ರಜೆ ಕಳೆಯಲೆಂದು ಕುಟುಂಬ ಸಮೇತ ಕಾರಿನಲ್ಲಿ ಊರಿಗೆ ಬರುತ್ತಿದ್ದರು. ಈ ವೇಳೆ, ಅವರು ಪ್ರಯಾಣಿಸುತ್ತಿದ್ದ ಕಾರ್‌ಗೆ ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಕಾರು (ಬಲೆನೊ) ಗುದ್ದಿದೆ. ಇದರಿಂದ, ವಾಹನ ಚಲಾಯಿಸುತ್ತಿದ್ದ ರವಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಕಾರು, ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು, ಮೈಸೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಸಾರಿಗೆ ಬಸ್‌ಗೆ ಗುದ್ದಿದೆ.

ADVERTISEMENT

ಅಪಘಾತದ ತೀವ್ರತೆಗೆ ರವಿ ಹಾಗೂ ಪುತ್ರಿ ಸುಕನ್ಯಾ ಸ್ಥಳದಲ್ಲೇ ಮೃತಪಟ್ಟರು. ಪತ್ನಿ ಮಂಜುಳಾ ಹಾಗೂ ಪುತ್ರ ಸಾಗರ್‌, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದರು.

ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಅಪಘಾತಕ್ಕೆ ಕಾರಣನಾದ ಬಲೆನೊ ಚಾಲಕ, ತನ್ನ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಘಟನೆಯ ನಂತರ ಒಂದು ಗಂಟೆ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.