ADVERTISEMENT

ಚರ್ಚೆ: ರೋಪ್‌ ವೇ ನಿರ್ಮಾಣ ಯೋಜನೆ–ವಿವೇಕವಿದ್ದರೆ ಅದನ್ನು ಕೈಬಿಡಿ; ಜೋಸೆಫ್ ಹೂವರ್

ರಾಜ್ಯದ ವಿವಿಧ ಭಾಗಗಳಲ್ಲಿ ರೋಪ್‌ ವೇ ನಿರ್ಮಾಣ ಯೋಜನೆ ಸರಿಯಾದ ನಿರ್ಧಾರವೇ?

ಜೋಸೆಫ್ ಹೂವರ್
Published 11 ಮಾರ್ಚ್ 2022, 18:35 IST
Last Updated 11 ಮಾರ್ಚ್ 2022, 18:35 IST
   

ಅರಣ್ಯದ ಪ್ರಮಾಣವನ್ನು ಹೆಚ್ಚಿಸಲೇಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ, ಉಳಿದಿರುವ ಅತ್ಯಲ್ಪ, ಅತ್ಯಂತ ಸೂಕ್ಷ್ಮವಾದ ಜೈವಿಕ ವ್ಯವಸ್ಥೆಯನ್ನೂ ನಾಶ ಮಾಡಲು ಕರ್ನಾಟಕ ಸರ್ಕಾರವು ಮುಂದಾಗಿದೆ.

ಜಾಗತಿಕ ತಾಪಮಾನದಿಂದಾಗುವ ಪ್ರಕೃತಿ ವಿಕೋಪಗಳು ಈಚಿನ ದಿನಗಳಲ್ಲಿ ನೆಗಡಿಯ ರೀತಿಯಲ್ಲಿ ಸಾಮಾನ್ಯ ಎಂಬಂತಾಗಿದೆ. ಆದರೆ, ಇಂತಹ ವಿಕೋಪಗಳು ಒಟ್ಟು ಆಂತರಿಕ ಉತ್ಪನ್ನವನ್ನು ನೆಚ್ಚಿಕೊಂಡಿರುವ ಸರ್ಕಾರವನ್ನು ಹೈರಾಣು ಮಾಡಿವೆ.

ಅರ್ಥ ಮಾಡಿಕೊಳ್ಳಲು ಸಾಧ್ಯವೇ ಆಗದ ರೀತಿಯ ಮೇಘಸ್ಫೋಟಗಳಿಂದ ಉಂಟಾಗುವ ದಿಢೀರ್‌ ಪ್ರವಾಹಗಳು, ಅರಣ್ಯ ಮತ್ತು ಕೃಷಿ ಜಮೀನಿನ ಸ್ವರೂಪವನ್ನು ಬದಲಾಯಿಸಿವೆ. ಭೂ ಕುಸಿತಗಳು ಆಗಾಗ ನಡೆಯುತ್ತಿವೆ. ಇಂತಹ ಭೂ ಕುಸಿತಗಳು ಎಲ್ಲರನ್ನೂ ಕಾಡುತ್ತವೆಯಾದರೂ ಅದರಿಂದ ಹೆಚ್ಚು ತೊಂದರೆಗೆ ಒಳಗಾಗುವುದು ರೈತ ಸಮುದಾಯ. ವಿಸ್ತಾರವಾದ ಭೂಪ್ರದೇಶಗಳು ಬರಗಾಲದಿಂದಾಗಿ ಬರಡಾಗಿವೆ ಮತ್ತು ಮಳೆಯನ್ನೇ ಆಧರಿಸಿ ಕೃಷಿ ನಡೆಸುತ್ತಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ಜೀವ ವೈವಿಧ್ಯದ ಕೊರತೆಯು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ; ಅತ್ಯಂತ ಅಪಾಯಕಾರಿಯಾಗಿ ಪ‍ರಿಣಮಿಸಿದ ಕೋವಿಡ್‌ ಸಾಂಕ್ರಾಮಿಕದ ರೂಪದಲ್ಲಿ ಅದು ಕಾಣಿಸಿಕೊಂಡಿದೆ. ಜೀವ ವೈವಿಧ್ಯದ ಕೊರತೆಯೇ ಕೊರೊನಾ ವೈರಾಣುವಿನ ಸೃಷ್ಟಿಗೆ ಕಾರಣ ಎಂದು ಸಂಶೋಧಕರು ಮತ್ತು ಪರಿಸರ ವಿಜ್ಞಾನಿಗಳು ಹೇಳಿದ್ದಾರೆ. ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು ಸರ್ಕಾರವು ಗಂಭೀರವಾಗಿ ಏನನ್ನಾದರೂ ಮಾಡದೇ ಇದ್ದರೆ ಪರಿಸ್ಥಿತಿ ಇನ್ನಷ್ಟು ವಿಷಮಗೊಳ್ಳಬಹುದು.

ಏನು ಆಗಿದೆ, ಏನು ಆಗುತ್ತಿದೆ ಮತ್ತು ಏನು ಆಗಲಿದೆ ಎಂಬುದರ ಬಗ್ಗೆ ಸರ್ಕಾರಕ್ಕೆ ಸರಿಯಾದ ಅರಿವು ಇದೆ. ಹಾಗಿದ್ದರೂ ಸೂಕ್ಷ್ಮವಾದ ಪರಿಸರ ವ್ಯವಸ್ಥೆಯನ್ನು ನಾಶ ಮಾಡಲು ಸರ್ಕಾರ ಸಜ್ಜಾಗಿದೆ.

ಅತ್ಯಂತ ಮಹತ್ವದ್ದಾದ ಪಶ್ಚಿಮ ಘಟ್ಟಗಳ ಮೇಲೆ ರೈಲು ಮಾರ್ಗ, ಜಲವಿದ್ಯುತ್‌ ಮತ್ತು ಗಣಿಗಾರಿಕೆ ಯೋಜನೆಗಳ ಮೂಲಕ ನಡೆಯುತ್ತಿರುವ ದಾಳಿ ಮುಂದುವರಿದಿದೆ. ಆರ್ಥಿಕ ಅಭಿವೃದ್ಧಿಯ ಉದ್ದೇಶದಿಂದ ಅಂದಾಜು 27 ಲಕ್ಷ ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ. ಇವು ಹತ್ತಾರು ವರ್ಷ ಹಳೆಯ ಮರಗಳು. ಇದರ ಜತೆಗೆ, ಕೆಲವು ಜನರ ಧನ ದಾಹಕ್ಕಾಗಿ ಒಂದು ಕೋಟಿಗೂ ಹೆಚ್ಚು ಸಣ್ಣ ಮರಗಳನ್ನೂ (30 ಸೆಂ. ಮೀ.ಗೂ ಕಡಿಮೆ ಸುತ್ತಳತೆಯಿದ್ದರೆ ಅಂಥವುಗಳನ್ನು ಗಿಡ ಎಂದೇ ಪರಿಗಣಿಸಲಾಗುತ್ತದೆ) ಕಡಿಯಲು ನಿರ್ಧರಿಸಲಾಗಿದೆ. ಪಶ್ಚಿಮ ಘಟ್ಟಗಳ ಮೇಲಿನ ದಾಳಿ ಮುಂದುವರಿದಿರುವುದರ ನಡುವೆಯೇ, ಜೋಗ ಜಲಪಾತ, ಮುಳ್ಳಯ್ಯನಗಿರಿ, ಯಾಣ, ನಂದಿ ಬೆಟ್ಟ ಮತ್ತು ಚಾಮುಂಡಿ ಬೆಟ್ಟಗಳಲ್ಲಿ ರೋಪ್‌ ವೇ ನಿರ್ಮಾಣದ ಪ್ರಸ್ತಾವವನ್ನು ಸರ್ಕಾರ ಮುಂದಿಟ್ಟಿದೆ. ಪ್ರವಾಸೋದ್ಯಮದ ಮೂಲಕ ಹಣ ಗಳಿಸುವುದು ಇದರ ಉದ್ದೇಶ. ಇದು ಕೋಟ್ಯಂತರ ರೂಪಾಯಿ ವರಮಾನದ ವಹಿವಾಟು. ಪ್ರವಾಸಿಗರಿಗೆ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸಬೇಕಾದುದು ಅತ್ಯಂತ ಅಗತ್ಯ. ಆದರೆ, ರೋಪ್‌ವೇ ನಿರ್ಮಾಣದ ಹೆಸರಿನಲ್ಲಿಅತ್ಯಂತ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಹಾಳು ಮಾಡುವುದನ್ನು ತಪ್ಪಿಸಲು ಸಾಧ್ಯವಿದೆ.

ಜೋಗ ಜಲಪಾತದ ರೋಪ್‌ವೇ ಬಹುತೇಕ ಸಿದ್ಧವಾಗಿದೆ. ನಿಯಮ ಪ್ರಕಾರ ಪಡೆಯಬೇಕಿರುವ ಪರಿಸರ ಅನುಮತಿಗಳನ್ನು ಪಡೆಯದೆಯೇ ಕೆಲಸ ಮುಗಿಸಲಾಗಿದೆ ಎಂಬುದು ವಿಷಾದನೀಯ. ಶರಾವತಿ ಸಿಂಹಬಾಲದ ಕೋತಿ ವನ್ಯಜೀವಿ ಧಾಮಕ್ಕೆ ತಾಗಿಕೊಂಡಿರುವ ಸ್ಥಳದಲ್ಲಿ ಪಂಚತಾರಾ ಹೋಟೆಲ್‌ ನಿರ್ಮಾಣವಾಗುತ್ತಿದೆ. ಜಲಪಾತಕ್ಕೆ ಹೋಗುವ ರಮಣೀಯ ದಾರಿಯ ಸಮೀಪ ಜಮೀನು ಖರೀದಿಸಿರುವ ಕೆಲವು ರಾಜಕಾರಣಿಗಳನ್ನು ಓಲೈಸುವುದಕ್ಕಾಗಿ ಈಗಾಗಲೇ ಬಹಳ ಹಾನಿ ಮಾಡಲಾಗಿದೆ.

ಸರ್ಕಾರವು ತನ್ನ ಆಡಂಬರದ ಯೋಜನೆಗಳ ಬಗ್ಗೆ ಮರು ಚಿಂತನೆ ನಡೆಸಬೇಕಿದೆ. ಕನಿಷ್ಠ ಪಕ್ಷ, ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಇನ್ನೂ ಕಾಮಗಾರಿ ಆರಂಭವಾಗಿಲ್ಲದ ಯೋಜನೆಗಳ ಬಗ್ಗೆ ಮರು ಚಿಂತನೆ ಅಗತ್ಯವಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಹಚ್ಚ ಹಸಿರಿನ ಮಳ್ಳಯ್ಯನಗಿರಿಯ ಮೇಲೆ ಪ್ರವಾಸಿಗರ ದಾಳಿ ಈಗಾಗಲೇ ನಡೆಯುತ್ತಿದೆ. ಗಿರಿ ಮತ್ತು ಸುತ್ತಲಿನ ಅರಣ್ಯ ಪ್ರದೇಶದ ಮೇಲೆ ಪ್ರವಾಸಿಗರು ಭಾರಿ ಪ್ರಮಾಣದಲ್ಲಿ ಕಸ ತಂದು ಸುರಿಯುತ್ತಿದ್ದಾರೆ.

ಈ ಬೆಟ್ಟವು ಅತ್ಯಂತ ಸೂಕ್ಷ್ಮವಾಗಿದೆ ಮತ್ತು ಭೂಕುಸಿತದ ಅಪಾಯವನ್ನು ಎದುರಿಸುತ್ತಿದೆ. ಇದು ಪಶ್ಚಿಮ ಘಟ್ಟಗಳ ಪರಿಸರಸೂಕ್ಷ್ಮ ವಲಯದಲ್ಲಿಯೇ ಇದೆ.

ಗಿರಿಯನ್ನು ಏರುವ ದಾರಿಯಲ್ಲಿ ವಾಹನ ಚಲಾಯಿಸುವಾಗಲೇ ಪ್ರವಾಸಿಗರಿಗೆ ಭಾರಿ ಆನಂದ ದೊರೆಯುತ್ತದೆ. ಬೆಟ್ಟದ ಮೇಲಿನಿಂದ ಸಿಗುವ ನೋಟವು ಅದ್ಭುತವಾಗಿದೆ. ನಿಸರ್ಗದ ಮಡಿಲಲ್ಲಿ ಸಮಾಧಾನ ಪಡೆಯಲು ಬಯಸುವವರಿಗೆ ಇದು ಧಾರಾಳ.

ಪ್ರವಾಸಿಗರು ರೋಪ್‌ ವೇ ಬೇಕು ಎಂದಿಲ್ಲ ಎಂಬುದು ನಮಗೆಲ್ಲ ತಿಳಿದಿದೆ. ಇದು ಕೈಗಾರಿಕಾ ಕೇಂದ್ರಿತ ಅಧಿಕಾರಶಾಹಿಯು ರೂಪಿಸಿದ ಯೋಜನೆ. ವಿವೇಕ ಇದ್ದರೆ, ಅತ್ಯಂತ ಸೂಕ್ಷ್ಮವಾದ ಈ ಪ್ರದೇಶದಲ್ಲಿ ರೋಪ್‌ ವೇ ನಿರ್ಮಾಣವನ್ನು ಸರ್ಕಾರವು ಕೈಬಿಡಬೇಕು. ಆದರೆ, ಯೋಜನೆಯನ್ನು ಮುಂದಿಟ್ಟವರು ಮತ್ತು ದುರಾಸೆಯ ರಾಜಕಾರಣಿಗಳಿಗೆ ಇದರಿಂದ ಭಾರಿ ನಷ್ಟ ಉಂಟಾಗುತ್ತದೆ. ಜನರ ಶ್ರೇಯಸ್ಸಿಗಿಂತ ಯೋಜನೆಯಿಂದ ದೊರೆಯುವ ಲಂಚವೇ ಹೆಚ್ಚು ಆಕರ್ಷಕ.

ನಂದಿ ಬೆಟ್ಟದಲ್ಲಿ ರೋಪ್‌ ವೇ ನಿರ್ಮಿಸುವುದಕ್ಕಾಗಿ ₹100 ಕೋಟಿಯಷ್ಟು ಜನರ ಹಣವನ್ನು ವೆಚ್ಚ ಮಾಡಲಾಗಿದೆ. ಬೆಟ್ಟದಲ್ಲಿ ಇತ್ತೀಚೆಗೆ ಆಗಿರುವ ಭೂಕುಸಿತವು ಸರ್ಕಾರವು ಯೋಜನೆಯಿಂದ ಹಿಂದೆ ಸರಿಯುವಂತೆ ಮಾಡಿಲ್ಲ. ಈ ಯೋಜನೆಯನ್ನು ಕೈಬಿಟ್ಟು ಅದಕ್ಕೆ ನಿಗದಿ ಮಾಡಿದ ಹಣದಲ್ಲಿ ಈ ಪ್ರದೇಶದ ಜನರಿಗೆ ಕುಡಿಯುವ ನೀರು ಒದಗಿಸಬಹುದು, ಆಸ್ಪತ್ರೆಗಳು ಮತ್ತು ಶಾಲೆಗಳಲ್ಲಿ ಉತ್ತಮ ಸೌಲಭ್ಯ ಕಲ್ಪಿಸಬಹುದು.

ಮೈಸೂರು ನಗರದಲ್ಲಿ ಪ್ರವಾಸಿಗರ ಆಕರ್ಷಣೆಯ ಹಲವು ತಾಣಗಳಿವೆ. ಹಾಗಾಗಿ, ಚಾಮುಂಡಿ ಬೆಟ್ಟದ ರೋಪ್‌ವೇ ಯೋಜನೆಯನ್ನು ಕೈಬಿಡಬಹುದು. ಇತ್ತೀಚೆಗೆ ಇಲ್ಲಿ ಆಗಿರುವ ಭೂ ಕುಸಿತವು ಅಧಿಕಾರಿಗಳ ಕಣ್ಣು ತೆರೆಸಬಹುದು ಎಂದು ಆಶಿಸೋಣ.

ಉತ್ತರ ಕನ್ನಡದ ಯಾಣವು ಅತ್ಯಂತ ಆಕರ್ಷಕ ತಾಣ. ಪಶ್ಚಿಮ ಘಟ್ಟದ ಮಡಿಲಿನ ಹಸಿರು ಕಾನನದ ನಡುವೆ ಇರುವ ಶಿಲಾ ರಚನೆಯನ್ನು ನೋಡಿ ಆನಂದಿಸಲು ಜನರು ಮುಗಿ ಬೀಳುತ್ತಾರೆ. ಸಂವೇದನೆಯೇ ಇಲ್ಲದ ಸರ್ಕಾರವೊಂದು ಮಾತ್ರ ಇಲ್ಲಿನ ಪರಿಸರ ವ್ಯವಸ್ಥೆಯನ್ನು ಹಾಳುಗೆಡವಲು ಬಯಸಬಹುದು. ಇಂತಹ ಪ್ರಯತ್ನವು ಪರಿಸರ ಬಿಕ್ಕಟ್ಟನ್ನು ಇನ್ನಷ್ಟು ಗಾಢಗೊಳಿಸಬಹುದು ಮತ್ತು ಈಗಾಗಲೇ ಜರ್ಜರಿತಗೊಂಡಿರುವ ಜೀವವೈವಿಧ್ಯವನ್ನು ಇನ್ನಷ್ಟು ಗಂಡಾಂತರಕ್ಕೆ ಒಡ್ಡಬಹುದು.

ಹವಾಮಾನ ಬದಲಾವಣೆಯಿಂದ ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸುಸ್ಥಿರವಾದ ಪ್ರವಾಸೋದ್ಯಮವು ಈಗಿನ ಅಗತ್ಯ.

ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದರೆ, ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಕೈಗೆತ್ತಿಕೊಂಡಿರುವ ಸುಸ್ಥಿರವಲ್ಲದ ಯೋಜನೆಗಳನ್ನು ಕೈಬಿಡಬೇಕು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ರೋಪ್‌ವೇ ಯೋಜನೆಯನ್ನು ವನ್ಯಜೀವಿ ಸಂರಕ್ಷಣೆಯ ಹಿತಾಸಕ್ತಿಗಾಗಿ ಕೈಬಿಟ್ಟದ್ದು ಸರ್ಕಾರಕ್ಕೆ ಮಾದರಿ ಆಗಬೇಕು.

ಪ್ರಿಯ ಸರ್ಕಾರವೇ, ಜಾಗತಿಕ ತಾಪಮಾನ ಏರಿಕೆಯ ಈ ಹೊತ್ತಿನಲ್ಲಿ ಸಂಪತ್ತಿಗಿಂತ ಆರೋಗ್ಯವೇ ಮುಖ್ಯ.

ಲೇಖಕ: ವನ್ಯಜೀವಿ ಸಲಹಾ ಮಂಡಳಿಯ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.