ದಿನೇಶ್ ಗುಂಡೂರಾವ್
– ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಹತ್ಯೆಯಾದ ಸುಹಾಸ್ ಶೆಟ್ಟಿ ವಿರುದ್ದ ರೌಡಿ ಶೀಟ್ ತೆರೆದಿದ್ದು 2020ರಲ್ಲಿ. ಆಗ ಅಧಿಕಾರದಲ್ಲಿದ್ದದ್ದು ಬಿಜೆಪಿ ಸರ್ಕಾರ. ಗೃಹ ಸಚಿವರಾಗಿದ್ದವರು ಬಸವರಾಜ ಬೊಮ್ಮಾಯಿ. ಇಂದು ಸುಹಾಸ್‌ನನ್ನು ಮಹಾತ್ಮ ಎಂದು ಬಿಂಬಿಸುತ್ತಿರುವ ಬಿಜೆಪಿಯವರು ಆಗ ಯಾಕೆ ರೌಡಿ ಪಟ್ಟಿಗೆ ಸೇರಿಸಿದ್ದರು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಸುಹಾಸ್ ಶೆಟ್ಟಿ ವಿರುದ್ಧ ರೌಡಿ ಶೀಟ್ ತೆರೆಯಲು ಪೊಲೀಸ್ ಇಲಾಖೆ ಹೊರಡಿಸಿದ್ದ ಆದೇಶದ ಪ್ರತಿಯನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ದಿನೇಶ್, ‘ಅಮಾಯಕರ ತಲೆಯಲ್ಲಿ ಮತಾಂಧತೆಯ ಅಮಲು ತುಂಬಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುತ್ತಿರುವ ಬಿಜೆಪಿ ನಾಯಕರ ಗಮನಕ್ಕೆ ಇದು’ ಎಂದಿದ್ದಾರೆ.
‘ಕರಾವಳಿಯನ್ನು ಕೋಮು ಪ್ರಯೋಗ ಶಾಲೆಯಾಗಿ ಮಾಡಿಕೊಂಡಿರುವ ಬಿಜೆಪಿಯವರೇ ಕ್ರಿಮಿನಲ್‌ಗಳ ನಿಜವಾದ ಸೃಷ್ಟಿಕರ್ತರು. ಅವರು ಅಧಿಕಾರದಲ್ಲಿದ್ದಾಗ ಕ್ರಿಮಿನಲ್‌ಗಳನ್ನು ಸೃಷ್ಟಿಸುತ್ತಾರೆ, ರೌಡಿ ಶೀಟ್ ತೆರೆಯುತ್ತಾರೆ. ಹೆಣ ಬಿದ್ದ ಕೂಡಲೆ ಅದೇ ಕ್ರಿಮಿನಲ್‌ಗಳನ್ನು ಮಹಾತ್ಮರಂತೆ ಬಿಂಬಿಸಿ ಹುತಾತ್ಮರನ್ನಾಗಿ ಮಾಡುತ್ತಾರೆ’ ಎಂದಿದ್ದಾರೆ.
‘ಸುಹಾಸ್ ಹತ್ಯೆ ನಂತರ ಕೂಗುಮಾರಿಗಳಂತೆ ಅರಚುತ್ತಿರುವ ಯಾರ ಮಕ್ಕಳಾದರೂ ಧರ್ಮದ ಅಮಲಿನಲ್ಲಿ ಬೀದಿ ಕಾಳಗ ಮಾಡುತ್ತಿದ್ದಾರೆಯೇ? ಅಥವಾ ಧರ್ಮಕ್ಕಾಗಿ ಬಡಿದಾಡುತ್ತಿದ್ದಾರೆಯೆ? ಬಿಜೆಪಿ ನಾಯಕರ ಧರ್ಮಾಂಧತೆಗೆ ಬೀದಿ ಹೆಣವಾಗುತ್ತಿರುವುದು ಬಡವರ ಮಕ್ಕಳು. ಇದು ಸತ್ಯವಲ್ಲವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.