ADVERTISEMENT

BBMP ಕಾಮಗಾರಿ KRIDLಗೆ ವಹಿಸಬೇಡಿ: ಲೋಕಾಯುಕ್ತದಿಂದ ಸರ್ಕಾರಕ್ಕೆ ಶಿಫಾರಸು

ಬಿಬಿಎಂಪಿ: ₹ 118.26 ಕೋಟಿ ಅಕ್ರಮ: ಲೋಕಾಯುಕ್ತದಿಂದ ಸರ್ಕಾರಕ್ಕೆ ಶಿಫಾರಸು

ರಾಜೇಶ್ ರೈ ಚಟ್ಲ
Published 9 ಫೆಬ್ರುವರಿ 2022, 20:43 IST
Last Updated 9 ಫೆಬ್ರುವರಿ 2022, 20:43 IST
BBMP
BBMP    

ಬೆಂಗಳೂರು: ರಾಜರಾಜೇಶ್ವರಿ ನಗರ (ಆರ್‌.ಆರ್‌. ನಗರ) ಕ್ಷೇತ್ರದಲ್ಲಿ 114 ಕಾಮಗಾರಿಗಳನ್ನು ನಿರ್ವಹಿಸದೆಯೇ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ₹ 118.26 ಕೋಟಿ ಹೆಚ್ಚುವರಿ ಪಾವತಿ ಮಾಡಿ ಅಕ್ರಮ ಎಸಗಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ, ಇನ್ನು ಮುಂದೆ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಯಾವುದೇ ಮೂಲಸೌಲಭ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸಬಾರದು ಎಂದು ಶಿಫಾರಸು ಮಾಡಿದೆ.

'ಆರ್‌.ಆರ್‌. ನಗರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸದೆ ₹ 250 ಕೋಟಿ ಭ್ರಷ್ಟಾಚಾರ ಎಸಗಲಾಗಿದೆ’ ಎಂದು ಆರೋಪಿಸಿ ದಾಖಲೆಗಳ ಸಹಿತ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌, ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರು ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ.

‘ಒಟ್ಟು 126 ಕಾಮಗಾರಿಗಳಲ್ಲಿ 114 ಕಾಮಗಾರಿಗಳ ಅನುಷ್ಠಾನದಲ್ಲಿ ಭಾರಿ ಲೋಪ ಆಗಿದೆ. ಕೆಆರ್‌ಐಡಿಎಲ್‌ ನಿರ್ವಹಿಸುವ ಕಾಮಗಾರಿಗಳ ಮೇಲೆ ನಿಗಾ ಇರಿಸಬೇಕಾದ ಬಿಬಿಎಂಪಿ ಅಧಿಕಾರಿಗಳೇ ಈ ಲೋಪಕ್ಕೆ ಮುಖ್ಯ ಕಾರಣ’ ಎಂದು ವರದಿಯಲ್ಲಿದೆ.

ADVERTISEMENT

‘ಸರ್ಕಾರದ ಅನುದಾನದ ದುರ್ಬಳಕೆ ತಪ್ಪಿಸಿ ಗುಣಮಟ್ಟದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕಾದುದು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಕರ್ತವ್ಯ. ಎರಡು ವರ್ಷಗಳಲ್ಲಿ ಬಿಬಿಎಂಪಿಯು ಕೆಆರ್‌ಐಡಿಎಲ್‌ಗೆ ವಹಿಸಿ ಅನುಷ್ಠಾನಗೊಂಡಿರುವ ಅಥವಾ ಅನುಷ್ಠಾನದ ಹಂತದಲ್ಲಿರುವ ಒಟ್ಟು ಕಾಮಗಾರಿಗಳಲ್ಲಿ ಶೇ 10ರಷ್ಟನ್ನು ಸಮೀಕ್ಷೆ ನಡೆಸಲು ಉನ್ನತ ಅಧಿಕಾರಿಯ ನೇತೃತ್ವದಲ್ಲಿ ತಜ್ಞರ ವಿಶೇಷ ಸಮಿತಿಯೊಂದನ್ನು ರಚಿಸಬೇಕು ಅಥವಾ ಪರ್ಯಾಯವಾಗಿ, ಲೋಕಾಯುಕ್ತ ಕಾಯ್ದೆಯ ಸೆಕ್ಷನ್‌ 7(2ಎ) ಅಡಿ, ಸರ್ಕಾರ ತನ್ನ ಅಧಿಕಾರವನ್ನು ಚಲಾಯಿಸಿ, ಕಳೆದ ಎರಡು ವರ್ಷಗಳಲ್ಲಿ ಕೆಆರ್‌ಐಡಿಎಲ್‌ಗೆ ಬಿಬಿಎಂಪಿ ವಹಿಸಿ ಪೂರ್ಣಗೊಳಿಸಿದ ಅಥವಾ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ತನಿಖೆಗಾಗಿ ಲೋಕಾಯುಕ್ತಕ್ಕೆ ವಹಿಸಬೇಕು’ ಎಂದೂ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

‘ತಕ್ಷಣ ಕಪ್ಪು ಪಟ್ಟಿಗೆ ಸೇರಿಸಿ’

‘ಟೆಂಡರ್‌ನಲ್ಲಿ ನಿರ್ದಿಷ್ಟಪಡಿಸಿದಂತೆ ಕಾಮಗಾರಿಗಳು ಅನುಷ್ಠಾನಗೊಂಡಿವೆ ಎಂದು ಗುಣಮಟ್ಟ ತಪಾಸಣೆ ನಡೆಸಿದ ತಟಸ್ಥ ಸಂಸ್ಥೆ ‘ಸಿವಿಲ್‌ ಸ್ಕ್ವೇರ್‌ ಕನ್ಸಲ್ಟಂಟ್ಸ್‌’ (ಸಿವಿಲ್‌ ಎಂಜಿನಿಯರಿಂಗ್ ಕನ್ಸ್‌ಲ್ಟಂಟ್ಸ್‌) ವರದಿ ನೀಡಿದೆ ಎಂದು ಲೋಕಾಯುಕ್ತಕ್ಕೆ ಕೆಐಆರ್‌ಡಿಎಲ್‌ ಮಾಹಿತಿ ನೀಡಿದೆ. ಆದರೆ, ಕಾಮಗಾರಿಯ ಗುಣಮಟ್ಟ ತಪಾಸಣೆಯನ್ನು ನಡೆಸದೆಯೇ, ಕಣ್ಣು ಮುಚ್ಚಿ ಸಂಸ್ಥೆ ತನ್ನ ವರದಿ ನೀಡಿತ್ತು ಎಂಬ ಅಂಶ ತನಿಖೆಯಿಂದ ಬಹಿರಂಗವಾಗಿದೆ. ಹೀಗಾಗಿ, ಬಿಬಿಎಂಪಿ ಮತ್ತು ಕೆಆರ್‌ಐಡಿಎಲ್‌ ತಕ್ಷಣದಿಂದಲೇ ಈ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅಲ್ಲದೆ, ತಪಾಸಣೆ ನಡೆಸುವ ತಟಸ್ಥ ಸಂಸ್ಥೆಗಳ ಪಟ್ಟಿಯಿಂದಲೇ ಈ ಸಂಸ್ಥೆಯನ್ನು ತೆಗೆದುಹಾಕಬೇಕು. ರಾಜ್ಯ ಸರ್ಕಾರ ಕೂಡಾ ಯಾವುದೇ ಕಾಮಗಾರಿಯ ತಪಾಸಣೆಯ ಹೊಣೆಯನ್ನು ಈ ಸಂಸ್ಥೆಗೆ ನೀಡಬಾರದು’ ಎಂದು ತನಿಖಾ ವರದಿಯಲ್ಲಿ ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.