ADVERTISEMENT

ಆರ್‌.ಆರ್‌. ನಗರ, ಶಿರಾ ಕ್ಷೇತ್ರಗಳ ಉಪ ಚುನಾವಣೆ ಮತ ಎಣಿಕೆ ನಾಳೆ

ಸಂಭ್ರಮಾಚರಣೆ, ಪಟಾಕಿ ಸಿಡಿಸಲು ಅವಕಾಶ ಇಲ್ಲ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 12:04 IST
Last Updated 9 ನವೆಂಬರ್ 2020, 12:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಇದೇ 3ರಂದು ಉಪ ಚುನಾವಣೆ ನಡೆದ ಆರ್‌.ಆರ್‌. ನಗರ ಮತ್ತು ಶಿರಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮಂಗಳವಾರ ನಡೆಯಲಿದ್ದು, ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎಂಬುದು ಮಧ್ಯಾಹ್ನದ ವೇಳೆಗೆ ಗೊತ್ತಾಗಲಿದೆ.

‘ಆರ್‌.ಆರ್‌. ನಗರದ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಿಗ್ಗೆ 8ಕ್ಕೆ ಆರಂಭವಾಗಲಿದೆ’ ಎಂದು ಚುನಾವಣಾ ಅಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದರು.

ಮತ ಎಣಿಕೆ ಕೇಂದ್ರದಲ್ಲಿ (ಹಲಗೇವಡೇರಹಳ್ಳಿಯಲ್ಲಿರುವ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆ) ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮತ ಎಣಿಕೆ ನಡೆಯಲಿರುವ ಒಂದು‌ ಟೇಬಲ್‌ಗೆ ಮೂರು ಜನ ಸಿಬ್ಬಂದಿ ಇರುತ್ತಾರೆ. ಅಧಿಕಾರಿಗಳು ಮತ್ತು ಆಯಾ ಪಕ್ಷದ ಕಾರ್ಯಕರ್ತರು ಬೆಳಿಗ್ಗೆ 7 ಗಂಟೆಗೆ ಎಣಿಕೆ ಕೇಂದ್ರಕ್ಕೆ ಬರಬೇಕು’ ಎಂದರು.

ADVERTISEMENT

‘ನಾಲ್ಕು ಕೊಠಡಿಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಈ ನಾಲ್ಕು ಕೊಡಿಗಳಲ್ಲಿ ಏಳು ಟೇಬಲ್‌ಗಳಂತೆ ಸೇರಿ ಒಟ್ಟು 28 ಟೇಬಲ್‌ಗಳು ಇರಲಿವೆ. ಪ್ರತಿ ಕೊಠಡಿಗೆ ಒಬ್ಬೊಬ್ಬರು ಹಿರಿಯ ಕೆಎಎಸ್ ಅಧಿಕಾರಿ ಉಸ್ತುವಾರಿ ಇರುತ್ತಾರೆ. 250 ಜನ ಮತ ಏಣಿಕೆ ಸಿಬ್ಬಂದಿ ಇರುತ್ತಾರೆ. ನಾಳೆ 7.45ಕ್ಕೆ ಬೆಳಿಗ್ಗೆ ಸ್ಟ್ರಾಂಗ್ ರೂಂ ತೆರೆಯಲಾಗುವುದು. 8 ಗಂಟೆಗೆ ಅಂಚೆ ಮತ ಏಣಿಕೆ ಆರಂಭವಾಗಲಿದೆ. 412 ಅಂಚೆ ಮತಗಳು ಬಂದಿವೆ.8.30ಕ್ಕೆ ಮತ ಯಂತ್ರಗಳ (ಇವಿಎಂ) ಮತ ಏಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ 12.30ಯಿಂದ 1 ಗಂಟೆ ವೇಳೆಗೆ ಎಣಿಕೆ ಕಾರ್ಯ ಮುಗಿಯಲಿದೆ’ ಎಂದರು.

‘ಮತ ಎಣಿಕೆ ಕೇಂದ್ರದಒಳಗೆ ಮೊಬೈಲ್‌, ಬ್ಯಾಗ್‌ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ. ಮತ ಎಣಿಕೆ ಕೇಂದ್ರದ ಒಳಗೆ ಬೇರೆ ಯಾರಿಗೂ ಪ್ರವೇಶ ಇಲ್ಲ. ಪ್ರತಿಯೊಬ್ಬರು ಮಾಸ್ಕ್‌ ಧರಿಸಬೇಕು. ಅಂತರ ಕಾಪಾಡಲು ಎಲ್ಲ ವ್ಯವಸ್ಥೆ ಮಾಡಿದ್ದೇವೆ. ಮತ ಎಣಿಕೆ ಕೇಂದ್ರದಲ್ಲಿ ಸ್ಯಾನಿಟೈಸರ್‌ ನೀಡಲಾಗುವುದು. ಥರ್ಮಲ್‌ ಸ್ಕ್ಯಾನಿಂಗ್‌ ಇರಲಿದೆ’ ಎಂದರು.

ಸೂಕ್ತ ಭದ್ರತೆ: ‘ಕ್ಷೇತ್ರದಲ್ಲಿ ಶಾಂತಯುತವಾಗಿ‌ ಮತದಾನ ನಡೆದಿದೆ. ಮತಯಂತ್ರಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂ ಸುರಕ್ಷಿತವಾಗಿದೆ. ಮತ ಎಣಿಕೆ ಮಂಗಳವಾರ ನಡೆಯಲಿರುವ ಕಾರಣ ಅಗತ್ಯ ಭದ್ರತೆ ಮಾಡಿಕೊಂಡಿದ್ದೇವೆ’ ಎಂದು ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಹೇಳಿದರು.

‘ಎಣಿಕಾ ಕೇಂದ್ರದಲ್ಲಿ ನಾಲ್ಕು ಹಂತಗಳಲ್ಲಿ ಭದ್ರತೆ ಇರಲಿದೆ. ಮೊದಲ ಹಂತದಲ್ಲಿ ನೂರು ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗುವುದು. ಎರಡು ದ್ವಾರಗಳಲ್ಲಿ ಪಾಸ್ ನೋಡಿ ಮತ ಏಣಿಕೆ ಕೇಂದ್ರದ ಒಳಗೆ ಬಿಡಲಾಗುವುದು. ಇಬ್ಬರು ಡಿಸಿಪಿಗಳೂ, ನಾಲ್ವರು ಎಸಿಪಿಗಳು, 20 ಪೊಲೀಸ್‌ ಇನ್‌ಸ್ಪೆಕ್ಟರ್‌ ಸೇರಿ ಭದ್ರತೆಗೆ 600 ಪೊಲೀಸ್ ಸಿಬ್ಬಂದಿ ನೇಮಿಸಲಾಗುವುದು. ಬೆಳಿಗ್ಗೆ 6ರಿಂದ ಮದ್ಯರಾತ್ರಿವರೆಗೂ‌ ನಿಷೇಧಾಜ್ಞೆ ಜಾರಿ ಇರಲಿದೆ ಎಂದೂ ಹೇಳಿದರು.

‘ಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗುವುದು. ಬೆಳಿಗ್ಗೆ 6 ಗಂಟೆಯಿಂದ ಮದ್ಯ ಮಾರಾಟ ನಿಷೇಧಿಸಲಾಗುವುದು’ ಎಂದೂ ಹೇಳಿದರು.

ಸಂಭ್ರಮಾಚಾರಣೆಗೆ ಅವಕಾಶ ಇಲ್ಲ: ‘ಮತ ಎಣಿಕೆ ಬಳಿಕ ಗೆದ್ದ ಅಭ್ಯರ್ಥಿಗಳ ಪರ ಮತಗಟ್ಟೆ ಸಮೀಪ ಸಂಭ್ರಮಾಚರಣೆಗೆ ಮತ್ತು ಪಟಾಕಿ ಸಿಡಿಸಲು ಅವಕಾಶ ಇಲ್ಲ. ಮತ ಎಣಿಕೆ ಕೇಂದ್ರದ ಮುಂದಿನ ರಸ್ತೆಯಲ್ಲಿ‌ ಸಂಚಾರ ನಿಷೇಧ ಮಾಡಲಾಗುವುದು. ವಾಹನ‌ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ರಾಜ್ಯದಲ್ಲಿ ಪಟಾಕಿ‌ ನಿಷೇಧವಿದ್ದು, ಪಟಾಕಿ ಹೊಡೆದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್‌ ಆಯುಕ್ತ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.