ADVERTISEMENT

ಮಂಡ್ಯ: ಕಾರು ಅಡ್ಡಗಟ್ಟಿ ₹ 1.24 ಕೋಟಿ ಮೌಲ್ಯದ ಆಭರಣ ದರೋಡೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 15:59 IST
Last Updated 14 ಏಪ್ರಿಲ್ 2022, 15:59 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೆರಗೋಡು (ಮಂಡ್ಯ ಜಿಲ್ಲೆ): ಮಂಡ್ಯ ತಾಲ್ಲೂಕಿನ ಗಂಟಗೌಡನಹಳ್ಳಿ ಬಳಿ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ₹ 1.24 ಕೋಟಿಗೂ ಹೆಚ್ಚು ಮೊತ್ತದ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಮಂಡ್ಯ, ಬಸರಾಳು, ಜಕ್ಕನಹಳ್ಳಿ, ಕೆರಗೋಡು ಭಾಗದ ಚಿನ್ನದ ಅಂಗಡಿಳಿಗೆ ಆಭರಣ ಪೂರೈಸಲು ಮೈಸೂರಿನ ರಿಷಬ್‌ ಜುವೆಲರ್ಸ್‌ ಮಾಲೀಕ ಅಶೋಕ್ ಒಡಂಬಡಿಕೆ ಮಾಡಿಕೊಂಡಿದ್ದರು. ತಮ್ಮ ಸಿಬ್ಬಂದಿ ಮಾತೂರಾಂ, ಲಲಿತ್‌ ಎಂಬ ಇಬ್ಬರು ವ್ಯಕ್ತಿಗಳನ್ನು ಆಭರಣ ಪೂರೈಕೆಗಾಗಿ ಕಳುಹಿಸಿದ್ದರು.

ಜಕ್ಕನಹಳ್ಳಿ, ಬಸರಾಳು ಅಂಗಡಿಗಳಿಗೆ ಆಭರಣ ವಿತರಣೆ ಮಾಡಿ ಕೆರಗೋಡು ಅಂಗಡಿಗಳಿಗೆ ವಿತರಿಸಲು ಮಂಡ್ಯ–ಬಸರಾಳು ರಸ್ತೆಯಲ್ಲಿ ಬರುತ್ತಿದ್ದರು. ಗಂಟಗೌಡನಹಳ್ಳಿ ಗೇಟ್ ಬಳಿ ಬರುತ್ತಿದ್ದಾಗ ಎದುರು ರಸ್ತೆಯಲ್ಲಿ 1 ಕಾರ್‌ನಲ್ಲಿ ನಾಲ್ವರು, ಬೈಕ್‌ನಲ್ಲಿ ಇಬ್ಬರು ದುಷ್ಕರ್ಮಿಗಳು ಕಾರು ಅಡ್ಡಗಟ್ಟಿದ್ದಾರೆ.

ADVERTISEMENT

ಕಾರು ಗಾಜು ಪಡೆದ ದುಷ್ಕರ್ಮಿಗಳು ಮಾತುರಾಂಗೆ ರಾಡ್‌ನಿಂದ ತಲೆಗೆ ಬಲವಾಗಿ ಥಳಿಸಿದ್ದಾರೆ. ಲಲಿತ್ ಹೊಟ್ಟೆಗೆ ಗುದ್ದಿ ಮುಖಕ್ಕೆ ರಾಸಾಯನಿಕ ಸಿಂಪಡಣೆ ಮಾಡಿ ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ಕಾರ್‌ನಲ್ಲಿದ್ದ ₹ 1.24 ಕೋಟಿ ಮೌಲ್ಯದ ಆಭರಣ ಹೊತ್ತು ಪರಾರಿಯಾಗಿದ್ದಾರೆ.

ಘಟನೆಯ ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಾತೂರಾಂ, ಲಲಿತ್‌ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್, ಡಿವೈಎಸ್ಪಿ ಮಂಜುನಾಥ್, ಎಎಸ್‌ಪಿ ವೇಣುಗೋಪಾಲ್, ಸರ್ಕಲ್‌ ಇನ್‌ಸ್ಪೆಕ್ಟರ್‌ ಕ್ಯಾತೇಗೌಡ, ಕೆರಗೋಡು ಪಿಎಸ್‌ಐ ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆರಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಗ್ರಾಮಿಣ ಭಾಗದ ಚಿನ್ನದ ಅಂಗಡಿಗಳಿಗೆ ಹಲವು ವರ್ಷಗಳಿಂದ ಮೂಗುತಿ, ಸಣ್ಣ ಸಣ್ಣ ಓಲೆ, ಉಂಗುರ ಮುಂತಾದ ಆಭರಣಗಳನ್ನು ಪೂರೈಕೆ ಮಾಡುತ್ತಿದ್ದರು. ಇದನ್ನು ನೋಡಿಕೊಂಡಿದ್ದ ದುಷ್ಕರ್ಮಿಗಳು ದರೋಡೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಗಾಯಾಳುಗಳು ಸದ್ಯ ಚಿಕಿತ್ಸೆ ಪಡೆಯುತ್ತಿದ್ದು ನಂತರ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು. ಆರೋಪಿಗಳ ಪತ್ತೆಗೆ 2 ತಂಡ ರಚನೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.