ADVERTISEMENT

RSS ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಬಾರದು: ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 8:56 IST
Last Updated 14 ಅಕ್ಟೋಬರ್ 2025, 8:56 IST
<div class="paragraphs"><p>ದಿನೇಶ್‌ ಗುಂಡೂರಾವ್‌</p></div>

ದಿನೇಶ್‌ ಗುಂಡೂರಾವ್‌

   

ಬೆಳಗಾವಿ: ‘ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಒಂದು ರಾಜಕೀಯ ಸಂಘಟನೆಯೇ ಹೊರತು, ಸಾಮಾಜಿಕ ಸಂಘಟನೆಯಲ್ಲ. ಅದರ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಬಾರದು’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಆರ್‌ಎಸ್‌ಎಸ್‌ ನಿಷೇಧಿಸಬೇಕು. ಅದು ತನ್ನ ಚಟುವಟಿಕೆಗಳಿಗೆ ಸರ್ಕಾರಿ ಆವರಣ ಬಳಕೆ ಮಾಡಬಾರದು’ ಎಂದರು.

ADVERTISEMENT

‘ಆರ್‌ಎಸ್‌ಎಸ್ ನಾಯಕರು ವಿವಿಧ ಸರ್ಕಾರಗಳನ್ನು ರಚಿಸುವಲ್ಲಿ ಮತ್ತು ಉರುಳಿಸುವಲ್ಲಿ ಭಾಗಿಯಾಗಿದ್ದಾರೆ. ಚುನಾವಣೆಯಲ್ಲೂ ಆ ಸಂಘಟನೆಯ ನಾಯಕರು ಸ್ಪರ್ಧಿಸುತ್ತಾರೆ. ಹಾಗಾಗಿ ಅದು ಸಾಮಾಜಿಕ ಸಂಘಟನೆಯಲ್ಲ. ಸರ್ಕಾರಿ ನೌಕರರು ಆರ್‌ಎಸ್‌ಎಸ್‌ನ ಯಾವುದೇ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಬೇಕು’ ಎಂದು ಪುನರುಚ್ಚರಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ ಭೋಜನ ಕೂಟದಲ್ಲಿ ಸಂಪುಟ ಪುನರ್‌ರಚನೆ ಬಗ್ಗೆ ಚರ್ಚಿಸಲಿಲ್ಲ. ಅದಕ್ಕೆ ಹಾಜರಾಗಿದ್ದ ಯಾರೂ ಈ ವಿಷಯ ಪ್ರಸ್ತಾಪಿಸಿಯೇ ಇಲ್ಲ. ಅಲ್ಲಿ ವಿವಿಧ ಇಲಾಖೆಗಳ ಕಾರ್ಯಕ್ಷಮತೆ ಮತ್ತು ರಾಜ್ಯದ ಪರಿಸ್ಥಿತಿ ಬಗ್ಗೆ ಮಾತ್ರ ಚರ್ಚಿಸಲಾಯಿತು’ ಎಂದು ಹೇಳಿದರು.

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ಬೆಂಗಳೂರಿನ ರಸ್ತೆಗಳ ದಯನೀಯ ಸ್ಥಿತಿ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಪ್ರತಿಕ್ರಿಯಿಸಿದ ದಿನೇಶ್‌ , ‘ಕಳೆದ ಏಳು ತಿಂಗಳಿನಿಂದ ಮಳೆಯಾಗುತ್ತಿದ್ದು, ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾಗಿದೆ. ರಸ್ತೆಗಳ ಅಭಿವೃದ್ಧಿಗೆ ಯುದ್ಧೋಪಾದಿಯಲ್ಲಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು. ಮುಂದಿನ ನಾಲ್ಕು ತಿಂಗಳಲ್ಲಿ ಎಲ್ಲ ರಸ್ತೆಗಳು ಸಹಜ ಸ್ಥಿತಿಗೆ ಬರಲಿವೆ’ ಎಂದರು.

‘ರಾಜ್ಯದಾದ್ಯಂತ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಕಡ್ಡಾಯ ಕೆಲಸ ನಿಯಮ ಮತ್ತು ಕೌನ್ಸೆಲಿಂಗ್‌ ಮೂಲಕ ವೈದ್ಯರನ್ನು ನೇಮಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕ ಪ್ರಕ್ರಿಯೆ ನಡೆದಿದೆ. 230 ವೈದ್ಯರ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ. ಕಡ್ಡಾಯ ಕೆಲಸದ ನಿಯಮದ ಮೂಲಕ 1,800 ಹೆಚ್ಚುವರಿ ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.