ADVERTISEMENT

‘ಮೀಸಲಾತಿ ಹೋರಾಟಕ್ಕೆ ಆರೆಸ್ಸೆಸ್‌ ಕುಮ್ಮಕ್ಕು’– ಬಿ.ಕೆ.ಹರಿಪ್ರಸಾದ್‌

111 ಪುಟಗಳ ಬಜೆಟ್‌ ಮೂರು ನಾಮದಂತಿದೆ– ಬಿ.ಕೆ. ಹರಿಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 19:38 IST
Last Updated 15 ಮಾರ್ಚ್ 2021, 19:38 IST
ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌
ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌   

ಬೆಂಗಳೂರು: ‘ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ ಬಡವರ, ರೈತರ ವಿರೋಧಿ. 111 ಪುಟಗಳ ಈ ಬಜೆಟ್‌, ಮೂರು ನಾಮದಂತಿದೆ’ ಎಂದು ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಟೀಕಿಸಿದರು.

ವಿಧಾನ ಪರಿಷತ್‌ನಲ್ಲಿ ವಿತ್ತೀಯ ಕಲಾಪದ ವೇಳೆ ಮಾತನಾಡಿದ ಅವರು, ‘ವಿವಿಧ ಸಮುದಾಯಗಳ ಮೀಸಲಾತಿ ಹೋರಾಟದಲ್ಲಿ ಸಂಘ ಪರಿವಾರದ ಕೈವಾಡವಿದೆ’ ಎಂದು ಆರೋಪಿಸಿದರು.

‘ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆ ಮಾಡಿರುವ ಅನುದಾನಗಳ ವಿವರಣೆ ನೀಡಿದ ಅವರು, ‘ಈ ಸರ್ಕಾರ ಯಾವ ಸಮುದಾಯಗಳನ್ನು ಓಲೈಕೆ ಮಾಡುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ’ ಎಂದು ದೂರಿದರು.

ADVERTISEMENT

‘2015ರ ಚುನಾವಣೆಯಲ್ಲಿ ಆರೆಸ್ಸೆಸ್‌ ಮುಖಂಡರೊಬ್ಬರು ಮೀಸಲಾತಿ ರದ್ದುಪಡಿಸಬೇಕೆಂದು ಹೇಳಿದ್ದರು. ಅದಕ್ಕೆ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ತಕ್ಕ ಪ್ರತ್ಯುತ್ತರ ನೀಡಿದ್ದರು. ಬಿಹಾರದ ಜನರು ಸಂಘ ಪರಿವಾರದ ಹೇಳಿಕೆಗೆ ಪಾಠ ಕಲಿಸಿದ್ದರು. 2020ರಲ್ಲೂ ಇದೇ ರೀತಿಯ ಹೇಳಿಕೆ ಬಂದಿದೆ’ ಎಂದು ಹರಿಪ್ರಸಾದ್ ಆರೋಪಿಸಿದರು.

ಆಗ, ‘ಸಂಘ ಪರಿವಾರದ ಯಾವ ನಾಯಕರು ಆ ರೀತಿ ಹೇಳಿಕೆ ನೀಡಿಲ್ಲ. ತಪ್ಪು ಮಾಹಿತಿ ನೀಡಬೇಡಿ’ ಎಂದು ಬಿಜೆಪಿಯ ರವಿಕುಮಾರ್ ಆಕ್ಷೇಪಿಸಿದರು. ‘ಈ ರೀತಿಯ ಹೇಳಿಕೆಗಳು ಹೊರಬಂದಿರುವುದನ್ನು ನಾನು ಸಾಬೀತುಪಡಿಸಿದರೆ ರಾಜೀನಾಮೆ ನೀಡುತ್ತೀರಾ’ ಎಂದು ಹರಿಪ್ರಸಾದ್ ಸವಾಲು ಹಾಕಿದರು. ಈ ವಾದ-ವಿವಾದ ಗದ್ದಲಕ್ಕೆ ಕಾರಣವಾಯಿತು.

‘ಸಾಲ ಮಾಡಿ ತುಪ್ಪ ತಿನ್ನು ಎನ್ನುವಂತಿದೆ ಈ ಬಜೆಟ್‌’ ಎಂದು ಟೀಕಿಸಿದ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌, ‘ತಾನೇ ರೂಪಿಸಿದ ನೀತಿಗಳನ್ನು ಸರ್ಕಾರ ಅನುಷ್ಠಾನಗೊಳಿಸದೇ ಇದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಯಡಿಯೂರಪ್ಪ ಅವರು ಸಮತೋಲಿನ ಬಜಟ್‌ ಮಂಡಿಸಿದ್ದಾರೆ’ ಎಂದು ಬಿಜೆಪಿಯ ತಳವಾರ ಸಾಬಣ್ಣ ಸಮರ್ಥಿಸಿದರೆ, ‘ರಾಜ್ಯ ಸರ್ಕಾರ ಸೂಕ್ಷ್ಮ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನೆರವಿಗೆ ಬರಬೇಕು’ ಎಂದು ಜೆಡಿಎಸ್‌ನ ತಿಪ್ಪೇಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.