ADVERTISEMENT

ಆರ್‌ಎಸ್‌ಎಸ್‌ ಆಳ ಮತ್ತು ಅಗಲ: 16 ದಿನಗಳಲ್ಲಿ 84 ಸಾವಿರ ಪ್ರತಿ ಮುದ್ರಣ

ದೇವನೂರರ ಆರ್‌ಎಸ್‌ಎಸ್‌: ಆಳ ಅಗಲ ಕೃತಿ: ಸಂಭಾವನೆ ಬಗೆಗೂ ಚರ್ಚೆ

ಕೆ.ನರಸಿಂಹ ಮೂರ್ತಿ
Published 18 ಜುಲೈ 2022, 17:46 IST
Last Updated 18 ಜುಲೈ 2022, 17:46 IST
ಆರ್‌ಎಸ್ಎಸ್‌: ಆಳ ಮತ್ತು ಅಗಲ ಮುಖಪುಟ
ಆರ್‌ಎಸ್ಎಸ್‌: ಆಳ ಮತ್ತು ಅಗಲ ಮುಖಪುಟ   

ಮೈಸೂರು: 16 ದಿನದ ಹಿಂದೆ ಪ್ರಕಟವಾಗಿ ರಾಜ್ಯವ್ಯಾಪಿ ಸಂಚಲನ ಮೂಡಿಸಿರುವ ದೇವನೂರ ಮಹಾದೇವ ಅವರ ‘ಆರ್‌ಎಸ್‌ಎಸ್‌ ಆಳ ಮತ್ತು ಅಗಲ’ ಕೃತಿಯು 84 ಸಾವಿರ ಪ್ರತಿಗಳ ಮುದ್ರಣ ಕಂಡಿದೆ. ಮಾರಾಟಕ್ಕೆ ಸಿದ್ಧವಾಗುತ್ತಿರುವ ಕೃತಿಗಳನ್ನೂ ಸೇರಿಸಿದರೆ ಒಂದು ಲಕ್ಷ ದಾಟಲಿದೆ.

72 ಪುಟಗಳ ಕೃತಿ ಪ್ರಕಟಣೆಯ ಹಕ್ಕುಸ್ವಾಮ್ಯವನ್ನು ಮುಕ್ತವಾಗಿಟ್ಟಿರುವುದರಿಂದ, ವೃತ್ತಿಪರ ಪ್ರಕಾಶಕರಷ್ಟೇ ಅಲ್ಲದೆ, ವಿವಿಧ ಸಂಘಟನೆಗಳು ಕೂಡ ಪುಸ್ತಕವನ್ನು ಪ್ರಕಟಿಸುತ್ತಿವೆ.

ಮೊದಲಿಗೆ ಅಭಿರುಚಿ ಪ್ರಕಾಶನ, ಗೌರಿ ಮೀಡಿಯಾ ಟ್ರಸ್ಟ್, ಚಿಕ್ಕನಾಯಕನಹಳ್ಳಿಯ ನಡೆ– ನುಡಿ, ತಿಪಟೂರಿನ ಜನಸ್ಪಂದನ ಟ್ರಸ್ಟ್‌, ಮಾನವ ಬಂಧುತ್ವ ವೇದಿಕೆ ಹಾಗೂ ಭಾರತೀಯ ಪರಿವರ್ತನ ಸಂಘಕ್ಕೆ ಒಟ್ಟು 9 ಸಾವಿರ ಪ್ರತಿಗಳನ್ನು ಮುದ್ರಿಸುವ ಅವಕಾಶ ನೀಡಲಾಗಿತ್ತು. ಗೌರಿ ಮೀಡಿಯಾ ಟ್ರಸ್ಟ್‌ ಎರಡೇ ದಿನಗಳಲ್ಲಿ 2 ಸಾವಿರ ಪ್ರತಿಗಳನ್ನು ಮಾರಾಟ ಮಾಡಿತ್ತು.

ADVERTISEMENT

ನಂತರದ ದಿನಗಳಲ್ಲಿ ಸಾವಿರಾರು ಪ್ರತಿಗಳನ್ನು ಮುದ್ರಿಸಲಾಗಿದೆ. ಕೃತಿಯ ಮುಖಬೆಲೆ ₹ 40 ಇದ್ದು, ಕೆಲವೆಡೆ ₹ 25ಕ್ಕೂ ಮಾರಾಟ ಮಾಡಲಾಗುತ್ತಿದೆ. ಕೆಲವರು ಕೃತಿಯನ್ನು ಖರೀದಿಸಿ ಉಚಿತವಾಗಿಯೂ ವಿತರಿಸುತ್ತಿದ್ದಾರೆ. ಕೋಲಾರದ ಆದಿಮ ಪ್ರಕಾಶನ 1 ಸಾವಿರ ಪ್ರತಿಗಳನ್ನು ಮುದ್ರಿಸಿ, ₹ 25ಕ್ಕೆ ಮಾರಾಟ ಮಾಡುತ್ತಿದೆ.

ಸಂಭಾವನೆ ವಿಚಾರ: ‘ಕೃತಿಯ ಮುದ್ರಿತ ಪ್ರತಿಗಳು ಲಕ್ಷ ಮುಟ್ಟುತ್ತಿರುವ ವೇಳೆಯಲ್ಲೇ ಲೇಖಕರಿಗೆ ಪ್ರಕಾಶಕರು ಸಂಭಾವನೆ ನೀಡಬೇಕು’ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಆದಿಮ ಪ್ರಕಾಶನದ ಎಚ್‌.ಎಂ.ರಾಮಚಂದ್ರ,‘ಪುಸ್ತಕ ಪ್ರಕಟಿಸಿದ ಬಳಿಕ ಲೇಖಕರಿಗೆ ಸಂಭಾವನೆ ನೀಡುವುದು ಪ್ರಕಾಶಕರ ಪ್ರಾಥಮಿಕ ಜವಾಬ್ದಾರಿ. ಹೀಗಾಗಿ ನಮ್ಮ ಪ್ರಕಾಶನದ ವತಿಯಿಂದ ₹ 2 ಸಾವಿರ ಸಂಭಾವನೆಯನ್ನು ಅವರಿಗೆ ಸ್ವಯಂಸ್ಫೂರ್ತಿಯಿಂದ ನೀಡಿದೆವು’ ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ದೇವನೂರ ಮಹಾದೇವ, ‘ಕೃತಿಯ ಬೆಲೆಯನ್ನು ₹ 40ಕ್ಕಿಂತ ಹೆಚ್ಚಿಗೆ ನಿಗದಿ ಮಾಡಿದರೆ ಮಾತ್ರ ಸಂಭಾವನೆ ಕೊಡಬೇಕು ಎಂದು ಮೊದಲೇ ಹೇಳಿದ್ದೆ. ಈಗ ಅಷ್ಟೇ ದರವಿರುವುದರಿಂದ ಸಂಭಾವನೆ ನಿರೀಕ್ಷಿಸುವುದಿಲ್ಲ. ಇಂಗ್ಲಿಷ್‌ಗೆ ಕೃತಿ ಮುದ್ರಣಗೊಂಡರೆ ಈ ದರಕ್ಕಿಂತ ಹೆಚ್ಚಿರುವುದರಿಂದ ಅವರು ಕೊಡಬೇಕಾಗುತ್ತದೆ’ ಎಂದು ಹೇಳಿದರು. ‘ಎಲ್ಲ ಪ್ರಕಾಶಕರನ್ನು ಸಂಪರ್ಕಿಸಿ, ಮುದ್ರಣಕ್ಕೆ ಸಿದ್ಧಗೊಂಡ ಪ್ರತಿಗಳ ಅಂಕಿ ಅಂಶವನ್ನು ಸಂಗ್ರಹಿಸಬೇಕಿದೆ’ ಎಂದು ತಿಳಿಸಿದರು.

ದೇವನೂರರಿಗೆ ಪೊಲೀಸ್ ಭದ್ರತೆ

ಮೈಸೂರು: ದೇವನೂರ ಮಹಾದೇವ ಅವರಿಗೆ ಪೊಲೀಸ್‌ ಇಲಾಖೆಯು ಭದ್ರತೆ ಕಲ್ಪಿಸಿದೆ. ಕುವೆಂಪುನಗರದಲ್ಲಿರುವ ಅವರ ಮನೆಯ ಬಳಿ ಎರಡು ದಿನಗಳಿಂದ ಪೊಲೀಸರು ‍ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನಿವಾಸದ ಸುತ್ತಮುತ್ತಲಿನ ಚಲನವಲನಗಳ ಬಗ್ಗೆ ಕಣ್ಣಿಟ್ಟಿದ್ದಾರೆ. ‘ಆರ್‌ಎಸ್‌ಎಸ್‌ ಆಳ ಮತ್ತು ಅಗಲ’ ಕೃತಿ ರಚನೆ ನಂತರ ಮಹಾದೇವ ಬಹಳ ಚರ್ಚೆಯಲ್ಲಿದ್ದಾರೆ. ಪರ–ವಿರೋಧ ಹೇಳಿಕೆಗಳು ಬರುತ್ತಿವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರದೀಪ್‌ ಗುಂಟಿ, ‘ಮುಂಜಾಗ್ರತಾ ಕ್ರಮವಾಗಿ ದೇವನೂರರಿಗೆ ಭದ್ರತೆ ನೀಡಲಾಗಿದೆ. ಗರುಡ ಪೊಲೀಸರೂ ಎಂದಿನಂತೆ ಗಸ್ತು ನಿರ್ವಹಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.