ADVERTISEMENT

‘ಆರ್‌ಎಸ್‍ಎಸ್ ನಿಷೇಧಿಸುವುದು ಕಾಂಗ್ರೆಸ್ ಗಿಡ ಕಿತ್ತಂತೆ ಅಲ್ಲ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 19:07 IST
Last Updated 15 ನವೆಂಬರ್ 2018, 19:07 IST

ಬೆಂಗಳೂರು: ‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‍ ಗಾಂಧಿ ಅವರಂಥ ಸಾವಿರ ಜನ ಬಂದರೂ ಆರ್‌ಎಸ್‍ಎಸ್ ಅನ್ನು ನಿಷೇಧಿಸುವುದಿರಲಿ, ಆ ಸಂಘಟನೆಯ ಬುಡ ಅಲುಗಾಡಿಸಲೂ ಸಾಧ್ಯವಿಲ್ಲ’ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿದರು.

‘ನಿಮ್ಮ ಮುತ್ತಾತ, ತಾತ, ಅಪ್ಪ, ಅಮ್ಮನಿಂದಲೇ ಆರ್‌ಎಸ್‍ಎಸ್ ನಿಷೇಧಿಸಲು ಸಾಧ್ಯವಾಗಲಿಲ್ಲ. ಆರ್‌ಎಸ್‍ಎಸ್ ನಿಷೇಧಿಸುವುದು ಎಂದರೆ ಕಡ್ಲೆಪುರಿ ತಿಂದಂತೆಯೂ ಅಲ್ಲ, ಕಾಂಗ್ರೆಸ್ ಗಿಡ ಕಿತ್ತಂತೆಯೂ ಅಲ್ಲ’ ಎಂದು ಮಾಧ್ಯಮಗೋಷ್ಠಿಯಲ್ಲಿ ಗುರುವಾರ ವ್ಯಂಗ್ಯವಾಡಿದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್‌ಎಸ್‍ಎಸ್ ನಿಷೇಧಿಸುವುದಾಗಿ ಹೇಳಿರುವುದು ಅಪಹಾಸ್ಯ ಮಾಡಿದಂತೆ. ಹಿಂದೆ ಪಂಡಿತ್ ಜವಾಹರಲಾಲ್ ನೆಹರೂ ಅವರು ನಿಷೇಧ ಮಾಡಿದಾಗ ಸುಪ್ರೀಂ ಕೋರ್ಟ್‌ ಆ ನಿಷೇಧವನ್ನು ತೆರವುಗೊಳಿಸಿತ್ತು. ನ್ಯಾಯಾಲಯದ ತೀರ್ಪನ್ನು ನೆಹರೂ ಒಪ್ಪಿಕೊಳ್ಳಲು ಮುಂದಾಗದಿದ್ದಾಗ ಜನಾಭಿಪ್ರಾಯದ ಮೂಲಕ ಹೋರಾಟ ಮಾಡಲಾಯಿತು’ ಎಂದರು.

ADVERTISEMENT

ಹಣ ಬಿಡುಗಡೆಗೆ ಆಗ್ರಹ: ‘ಬರಪೀಡಿತ ತಾಲ್ಲೂಕುಗಳಲ್ಲಿ ತಕ್ಷಣವೇ ಬರ ಪರಿಹಾರ ಕಾಮಗಾರಿ ಕೈಗೊಳ್ಳಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ ಮಾಡಬೇಕು’ ಎಂದು ರಾಜ್ಯ ಸರ್ಕಾರವನ್ನು ರವಿ ಆಗ್ರಹಿಸಿದರು.

‘ಬರಪೀಡಿತ ತಾಲ್ಲೂಕುಗಳಲ್ಲಿ ಜನರು ಗುಳೆ ಹೋಗುವಂಥ ಸ್ಥಿತಿ ಇದೆ. ಜಿಲ್ಲಾ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗದಿದ್ದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇದೆ’ ಎಂದರು.

ವಿಳಂಬ ಯಾಕೆ?: ‘ಈ ಹಿಂದೆ ನೈಸ್ ರಸ್ತೆಯಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಎಚ್.ಡಿ. ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ಸಾಕಷ್ಟು ಹೋರಾಟ ನಡೆಸಿದ್ದರು. ಈ ಹಗರಣಕ್ಕೆ ಸಂಬಂಧಪಟ್ಟಂತೆ ಸದನ ಸಮಿತಿ ವರದಿಯನ್ನೂ ಸಲ್ಲಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಇನ್ನೂ ಏಕೆ ವಿಳಂಬ’ ಎಂದೂ ಅವರು ಪ್ರಶ್ನಿಸಿದರು.

‘ಬಿಜೆಪಿಯಲ್ಲಿ ಕಾಯಂ ಅಧ್ಯಕ್ಷರಿಲ್ಲ’

‘ಬಿಜೆಪಿಯಲ್ಲಿ ಯಾರೂ ಕಾಯಂ ಅಧ್ಯಕ್ಷರು ಇಲ್ಲ. ಕಾಲಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ರಾಜ್ಯ ಘಟಕದ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತದೆ. ಯಾರು ಅಧ್ಯಕ್ಷರಾಗಬೇಕು ಎಂಬುದನ್ನು ಪಕ್ಷದ ಸಂಸದೀಯ ಮಂಡಳಿ ನಿರ್ಧರಿಸುತ್ತದೆ’ ಎಂದು ಸಿ.ಟಿ.ರವಿ ಹೇಳಿದರು.

‘ಅಧ್ಯಕ್ಷ ಸ್ಥಾನಕ್ಕೆ ಪಕ್ಷದಲ್ಲಿ ಯಾರೂ ಆಕಾಂಕ್ಷಿಗಳು ಇಲ್ಲ. ಚುನಾವಣೆ ಸೋಲು ಗೆಲುವು ಸಹಜ. ಆತ್ಮಾವಲೋಕನ ನಡೆಯುತ್ತದೆ. ಎಲ್ಲವೂ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.