ಬೆಂಗಳೂರು: ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆ ಹಾಡಿದ್ದಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ಕ್ಷಮೆ ಯಾಚಿಸಿರುವುದನ್ನು ಸ್ವಾಗತಿಸಿರುವ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್, ‘ಕಾಂಗ್ರೆಸ್ ಪಕ್ಷದ ಸಿದ್ಧಾಂತದಲ್ಲಿ ರಾಜಿ ಇಲ್ಲ’ ಎಂದರು.
‘ಕೆಪಿಸಿಸಿ ಅಧ್ಯಕ್ಷರು ಆರ್‌ಎಸ್‌ಎಸ್ ಗೀತೆ ಹಾಡುವುದು ತಪ್ಪು. ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಹಾಡಿದ್ದರೆ ಕ್ಷಮೆ ಯಾಚಿಸಬೇಕುʼ ಎಂದು ಹರಿಪ್ರಸಾದ್ ಅವರು ಸೋಮವಾರ ಒತ್ತಾಯಿಸಿದ್ದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಹರಿಪ್ರಸಾದ್, ‘ಡಿ.ಕೆ. ಶಿವಕುಮಾರ್ ಅವರೊಂದಿಗೆ ವೈಯಕ್ತಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಬದಲಾಗಿ ಮಹಾತ್ಮ ಗಾಂಧಿಯನ್ನು ಕೊಂದ ಸಂಘಟನೆಯ ಹಾಡು ಹಾಡಿದ್ದಕ್ಕೆ ಮಾತ್ರ ವಿರೋಧ ವ್ಯಕ್ತಪಡಿಸಿದ್ದೆ’ ಎಂದರು.
‘ಉಪ ಮುಖ್ಯಮಂತ್ರಿಯಾಗಿ ಅವರು (ಶಿವಕುಮಾರ್) ಅದನ್ನು ಪಠಿಸಿದರೆ ನನಗೆ ಯಾವುದೇ ಆಕ್ಷೇಪವಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ, ಕಾಂಗ್ರೆಸ್, ಸಂವಿಧಾನ ಮತ್ತು ತ್ರಿವರ್ಣ ಧ್ವಜವನ್ನು ವಿರೋಧಿಸುವ ಆರ್‌ಎಸ್‌ಎಸ್‌ನ ಪ್ರಾರ್ಥನೆಯ ಹಾಡನ್ನು ಹಾಡುವ ಅಗತ್ಯ ಇಲ್ಲ’ ಎಂದು ಹೇಳಿದರು.
‘ಕಾಂಗ್ರೆಸ್ ಪಕ್ಷವನ್ನು ನಾನು ಅಥವಾ ಡಿ.ಕೆ. ಶಿವಕುಮಾರ್ ಕಟ್ಟಿಲ್ಲ. ಭವಿಷ್ಯಕ್ಕಾಗಿ ಅದನ್ನು ಉಳಿಸಲು ಯಾರೋ ನಮಗೆ ನೀಡಿದ್ದಾರೆ, ನಮಗೆ ಶಕ್ತಿ ಇದ್ದರೆ, ನಾವು ಅದನ್ನು ಉಳಿಸಿ ಭವಿಷ್ಯದ ಪೀಳಿಗೆಗೆ ನೀಡಬೇಕಾಗುತ್ತದೆ. ಇಲ್ಲಿ ಯಾರೂ ಶಾಶ್ವತವಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ರಾಹುಲ್ ಗಾಂಧಿಯವರ ಮೇಲೆ 54 ಕೇಸುಗಳಿವೆ. ರಾಹುಲ್ ಗಾಂಧಿಯವರ ವಿರುದ್ಧ ಕೆ.ಎನ್. ರಾಜಣ್ಣ ಮಾತನಾಡಿಲ್ಲ. ಯಾರ‍್ಯಾರ ನಿಲುವು ಏನು ಎನ್ನುವುದು ನಮಗೆ ಗೊತ್ತಿದೆ. ರಾಜಣ್ಣ, ಶಿವಕುಮಾರ್ ಇಬ್ಬರೂ ಕಾಂಗ್ರೆಸ್‌ನವರೆ. ನಿಷ್ಠೆ ಬಗ್ಗೆ ಚರ್ಚೆ ಬೇಡ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.