ADVERTISEMENT

ಆರ್‌ಟಿಇ: 7,636 ಮಂದಿಗೆ ಅವಕಾಶ

ಮೊದಲ ಸುತ್ತಿನ ಲಾಟರಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 6 ಮೇ 2019, 19:28 IST
Last Updated 6 ಮೇ 2019, 19:28 IST

ಬೆಂಗಳೂರು: ಈ ಸಾಲಿನ ಆರ್‌ಟಿಇ(ಶಿಕ್ಷಣ ಹಕ್ಕು ಕಾಯ್ದೆ) ಪ್ರಥಮ ಸುತ್ತಿನ ಲಾಟರಿ ಪ್ರಕ್ರಿಯೆ ಸೋಮವಾರ ಇಲ್ಲಿ ನಡೆದಿದ್ದು, ಅರ್ಹ 16,563 ವಿದ್ಯಾರ್ಥಿಗಳ ಪೈಕಿ 7,636 ಮಂದಿ ವಿವಿಧ ಶಾಲೆಗಳ ಪ್ರವೇಶಕ್ಕೆ ಅವಕಾಶ ಪಡೆದಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಇದೇ 15ರವರೆಗೆ ಶಾಲೆಗೆ ಸೇರಲು ಅವಕಾಶ ಇದೆ. ಇದೇ 25ರಂದು 2ನೇ ಸುತ್ತಿನ ಲಾಟರಿ ನಡೆಯಲಿದ್ದು, ಅಲ್ಲಿ ಆಯ್ಕೆಯಾದವರಿಗೆ 30ರವರೆಗೆ ಶಾಲೆಗೆ ಸೇರಲು ಅವಕಾಶ ಇರುತ್ತದೆ. ಅನುದಾನರಹಿತ ಶಾಲೆಗಳಲ್ಲಿ ಪ್ರವೇಶಾತಿಗೆ ಅವಕಾಶ ನೀಡಬೇಕೆಂದು ಕೋರಿ ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ರಿಟ್‌ ಅರ್ಜಿಯ ತೀರ್ಪನ್ನು ಕಾಯ್ದಿರಿಸಲಾಗಿದ್ದು, ಕೋರ್ಟ್‌ ನೀಡುವ ತೀರ್ಪನ್ನು ಜಾರಿಗೆ ತರಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಆಯುಕ್ತ ಎಂ.ಟಿ.ರೇಜು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಲಾಟರಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ 5,969 ಸಾಮಾನ್ಯ, 1,382 ಪರಿಶಿಷ್ಟ ಜಾತಿ, 22 ಪರಿಶಿಷ್ಟ ವರ್ಗ ಹಾಗೂ 23 ವಿಶೇಷ ವರ್ಗದವರಿದ್ದಾರೆ. ಈ ಮಕ್ಕಳ ಶುಲ್ಕ ಪಾವತಿಗೆ ಈಗಾಗಲೇ ಸರ್ಕಾರ ಹಣ ತೆಗೆದಿರಿಸಿದೆ ಎಂದರು.

ADVERTISEMENT

ಲಾಟರಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಆರ್‌ಟಿಇ ಪರ ಹೋರಾಟಗಾರ ಸುರೇಶ್‌ ಕುಮಾರ್‌ ಮತ್ತು ಇತರ ಹಲವು ಪೋಷಕರು ಮನವಿ ಸಲ್ಲಿಸಿ, ಮುಂಬರುವ ಹೈಕೋರ್ಟ್‌ ತೀರ್ಪನ್ನು ಯಾವುದೇ ಕುಂಟುನೆಪ ಹೇಳದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

* ಕಳೆದ ವರ್ಷ ಆಯ್ಕೆಮಾಡಲಾಗಿದ್ದ 10 ಸಾವಿರ ಮಕ್ಕಳು ಆರ್‌ಟಿಇ ಶಾಲೆ ಸೇರಿಲ್ಲ. ಇದನ್ನು ಗಮನಿಸಿ ಅನುದಾನ ರಹಿತ ಶಾಲೆಗಳಿಗೆ ಅವಕಾಶ ನೀಡಲು ಕ್ರಮ ಕೈಗೊಳ್ಳಲೇಬೇಕು

- ನಾಗಸಿಂಹ ಜಿ.ರಾವ್‌, ಆರ್‌ಟಿಇ ಕಾರ್ಯಪಡೆಯ ರಾಜ್ಯ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.